- June 21, 2022
‘ಸಂಗೀತ ಮಾಂತ್ರಿಕ’ ಅರ್ಜುನ್ ಜನ್ಯ ಹೊಸ ಹೆಜ್ಜೆ


ನಮ್ಮ ಕನ್ನಡ ಚಿತ್ರರಂಗದಲ್ಲಿ, ಕೆಲವು ಚಿತ್ರಗಳಲ್ಲಿ ಹಲವು ಜವಾಬ್ದಾರಿಗಳನ್ನು ಏಕ ಕಾಲಕ್ಕೆ ನಿಭಾಯಿಸಿಕೊಂಡು ಬರುವ ಕಲಾವಿದರಿದ್ದಾರೆ. ನಟನೆ-ನಿರ್ದೇಶನ, ಛಾಯಾಗ್ರಹಣ-ನಿರ್ದೇಶನ,, ಸಂಕಲನ-ನಿರ್ದೇಶನ, ಸಂಗೀತ ಹಾಗು ನಿರ್ದೇಶನ ಹೀಗೆ ಈ ಪ್ರಮುಖ ಜವಾಬ್ದಾರಿಗಳನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡು ಸಿನಿಮಾ ಮಾಡುವವರು ನಮ್ಮಲ್ಲಿ ಬಹಳ ಮಂದಿ ಇದ್ದಾರೆ. ಸದ್ಯ ಈ ಸಾಲಿಗೆ ಹೊಸ ಹೆಸರೊಂದು ಸೇರ್ಪಡೆಯಾಗುತ್ತಿದೆ. ಅವರೇ ನಮ್ಮ ಚಂದನವನದ ‘ಸಂಗೀತ ಮಾಂತ್ರಿಕ’ ಅರ್ಜುನ್ ಜನ್ಯ ಅವರು.






ತನ್ನ ಸುಮಧುರ ಸಂಗೀತ ಹಾಗು ಮನಸ್ಸಿಗೆ ಮುದ ನೀಡುವಂತ ಹಾಡುಗಳಿಂದ ಕನ್ನಡಿಗರ ಮನಸೆಳೆದಿರುವವರು ಅರ್ಜುನ್ ಜನ್ಯ. ಕನ್ನಡದ ಅದ್ಭುತ ಮೆಲೋಡಿ ಹಾಡುಗಳ ಸಾಲಿಗೆ ಹಲವಾರು ಹೊಸ ಹೆಸರಗಳನ್ನು ಸೇರಿಸಿದ ಕೀರ್ತಿ ಇವರದ್ದು. ಸದ್ಯ ಇವರು ನಿರ್ದೇಶನಕ್ಕಿಳಿಯುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ ಅರ್ಜುನ್ ಜನ್ಯ ಅವರು ತಮ್ಮ ಮೊದಲ ಸಿನಿಮಾವನ್ನು ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರಿಗೆ ನಿರ್ದೇಶಿಸಲಿದ್ದಾರೆ. ಈಗಾಗಲೇ ಸಿನಿಮಾದ ಕಥೆಯನ್ನು ರಚಿಸಲಾಗಿದ್ದು, ಒಂದಷ್ಟು ಅಂತಿಮ ಬದಲಾವಣೆಗಳಲ್ಲಿ ತಂಡ ತೊಡಗಿಕೊಂಡಿದೆ. ಈ ಬಗ್ಗೆ ಈಗಾಗಲೇ ಮಾತುಕತೆ ಮುಗಿದಿದ್ದು, ‘ಗಾಳಿಪಟ’ ಚಿತ್ರಕ್ಕೆ ನಿರ್ಮಾಪಕರಾಗಿದ್ದ ರಮೇಶ್ ರೆಡ್ಡಿ ಅವರೇ, ಈ ಚಿತ್ರಕ್ಕೂ ಬಂಡವಾಳ ಹೂಡಲಿದ್ದಾರೆ. ಸದ್ದಿಲ್ಲದೆ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಆರಂಭಿಸಿಕೊಂಡಿರುವ ಚಿತ್ರತಂಡ, 2022ರ ಅಂತ್ಯದ ಹೊತ್ತಿಗೆ ಅಧಿಕೃತವಾಗಿ ಸಿನಿಮಾ ಘೋಷಣೆ ಮಾಡಲಿದ್ದಾರೆ.




ಸ್ಯಾಂಡಲ್ವುಡ್ ನಲ್ಲಿ ಬಹಳಷ್ಟು ಸಂಗೀತ ನಿರ್ದೇಶಕರು ಸಿನಿಮಾ ನಿರ್ದೇಶನ ಮಾಡಿ ಯಶಸ್ಸು ಕಂಡವರಿದ್ದಾರೆ. ಇತ್ತೀಚಿಗಷ್ಟೇ ವಿ. ಹರಿಕೃಷ್ಣ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ‘ಯಜಮಾನ’ ಸಿನಿಮಾ ಮಾಡಿ ಜನಮನ್ನಣೆ ಪಡೆದು, ಇದೀಗ ‘ಕ್ರಾಂತಿ’ ಚಿತ್ರಕ್ಕೆ ಕೈ ಹಾಕಿದ್ದಾರೆ. ಅರ್ಜುನ್ ಜನ್ಯ ಅವರೂ ಸಹ ಇದೇ ಹಾದಿ ಹಿಡಿಯುವ ಭರದಲ್ಲಿದ್ದಾರೆ. ಸದ್ಯ ಶಿವಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರದ ಚಿತ್ರೀಕರಣದ ಆರಂಭ ಮುಂದಿನ ವರ್ಷಕ್ಕಾಗಬಹುದು.






