- July 6, 2022
ಬೆಳ್ಳಿತೆರೆಗೆ ಸನಿಹವಾಗುತ್ತಿದೆ ಅಪ್ಪು ಕನಸಿನ ‘ಗಂಧದಗುಡಿ’


“ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು.ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ.” ಪುನೀತ್ ರಾಜಕುಮಾರ್ ಅವರ ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುವ ಕೊನೆಯ ಸಾಲುಗಳಿವು. ಈ ಸಾಲು ಬರೆದಿರುವುದು ಅವರ ಕನಸಿನ, ಅವರದೇ ನಿರ್ಮಾಣದ ಸಾಕ್ಷ್ಯ ಚಿತ್ರವಾದ ‘ಗಂಧದಗುಡಿ’ಯ ಬಗ್ಗೆ. ಕನ್ನಡ ನಾಡಿನ ಮಗನಾಗಿ, ಪ್ರಕೃತಿಯ ಮಡಿಲಿನ ಮಗುವಾಗಿ ಮೆರೆದಿದ್ದ ಅಪ್ಪು, ಅದೇ ಹಸಿರಿನ ಬಗ್ಗೆ ವನ್ಯಜೀವನದ ಬಗ್ಗೆ ಮಾಡಹೊರಟಿದ್ದ ‘ಗಂಧದಗುಡಿ’ ಸಿನಿಮಾದ ಟೀಸರ್ ಬಿಡುಗಡೆಯನ್ನು ಘೋಷಿಸುವಾಗ ಈ ಸಾಲುಗಳನ್ನು ಬಳಸಿದ್ದರು. ಆದರೆ ವಿಧಿಯ ಬರಹ ಬೇರೆ ಕಥೆಯನ್ನೇ ಬರೆದಿತ್ತು.






2021ರ ನವೆಂಬರ್ 1ರಂದು ಚಿತ್ರದ ಟೀಸರ್ ಬಿಡುವುದಾಗಿ ‘ಪಿ ಆರ್ ಕೆ ಪ್ರೊಡಕ್ಷನ್ಸ್’ ಪರವಾಗಿ ಪುನೀತ್ ಘೋಷಿಸಿದ್ದರು. ಆದರೆ ಅದಕ್ಕೂ ಮುನ್ನವೇ ನಮ್ಮನ್ನ ಅಕಾಲಿಕವಾಗಿ ಅಗಲಿ ಹೋದರು. ಆದರು ಕೂಡ ಆ ಟೀಸರ್ ಡಿಸೆಂಬರ್ 6ರಂದು ಬಿಡುಗಡೆಯಾಗಿ, ಅಭಿಮಾನಿಗಳಲ್ಲಿ ಕಿರುಸಂತಸ ತಂದಿತ್ತು. ಸದ್ಯ ಈ ಸಿನಿಮಾದ ಬಿಡುಗಡೆಯ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ‘ಗಂಧದಗುಡಿ’ ಚಿತ್ರಮಂದಿರಗಳಲ್ಲೇ ತೆರೆಕಾಣುವುದು ಎಂಬ ಮಾತನ್ನು ಈಗಾಗಲೇ ‘ಪಿ ಆರ್ ಕೆ ಪ್ರೊಡಕ್ಷನ್ಸ್’ ಸಂಸ್ಥೆ ಖಾತ್ರಿಗೊಳಿಸಿದೆ. ಈಗ ಹರಿದಾಡುತ್ತಿರುವ ವಿಷಯಗಳ ಪ್ರಕಾರ ಇದೇ ಅಕ್ಟೋಬರ್ ಅಂತ್ಯ ಅಥವಾ ನವೆಂಬರ್ ಆರಂಭಕ್ಕೆ ‘ಗಂಧದಗುಡಿ’ ಬೆಳ್ಳಿತೆರೆ ಏರೋ ಸಾಧ್ಯತೆಗಳಿವೆ. ಸಾಮಾನ್ಯವಾಗಿ ‘ಪಿ ಆರ್ ಕೆ’ ಸಂಸ್ಥೆಯ ಸಿನಿಮಾಗಳು ಗುರುವಾರದಂದು ಬಿಡುಗಡೆ ಕಾಣುವುದರಿಂದ ಅಕ್ಟೋಬರ್ 27 ಅಥವಾ ನವೆಂಬರ್ 3 ಚಿತ್ರದ ಬಿಡುಗಡೆಯ ದಿನಾಂಕವಾಗಿರಬಹುದು ಎಂಬ ಊಹೆಗಳಿವೆ.






‘ಗಂಧದಗುಡಿ’ ಎಂಬ ಹೆಸರು ಕನ್ನಡಿಗರಿಗೂ ಅಚ್ಚುಮೆಚ್ಚು. ಅಣ್ಣಾವ್ರು ಹಾಗು ವಿಷ್ಣುದಾದಾ ಜೊತೆಯಾಗಿ ನಟಿಸಿದ ಸಿನಿಮಾ ಒಂದು ಕಡೆಯಾದರೆ, ನಮ್ಮ ನಾಡನ್ನೇ ಈ ಹೆಸರಿನಿಂದ ಕರೆಯುವುದು ಇನ್ನೊಂದು ಕಡೆ. ನಮ್ಮ ಕರ್ನಾಟಕದ ವನ್ಯಸಂಪತ್ತು, ಪ್ರಕೃತಿ ಸೌಂದರ್ಯ, ಪ್ರಾಣಿ-ಪಕ್ಷಿ ಗಳ ವೈವಿಧ್ಯವನ್ನು ಜಗತ್ತಿಗೆ ಪರಿಚಯಿಸೋ ಆಸೆಯಿಂದ ಅಪ್ಪು ಕಂಡಿದ್ದ ಕನಸು ಈ ‘ಗಂಧದಗುಡಿ’ ಸಿನಿಮಾ. ಚಿತ್ರವನ್ನ ಅಮೋಘವರ್ಷ ಅವರು ನಿರ್ದೇಶಿಸಿದ್ದು, ಅವರು ಹಾಗು ಪುನೀತ್ ರಾಜಕುಮಾರ್ ಅವರೇ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರತೀಕ್ ಶೆಟ್ಟಿ ಅವರ ಛಾಯಾಗ್ರಾಹಣ ಹಾಗು ಅಜನೀಶ್ ಲೋಕನಾಥ್ ಅವರ ಸಂಗೀತ ಚಿತ್ರಕ್ಕೆ ಇನ್ನಷ್ಟು ಜೀವ ತುಂಬಲಿದೆ. ಸದ್ಯ ಹೊರಗೋಡುತ್ತಿರುವ ಈ ಬಿಡುಗಡೆಯ ಸುದ್ದಿ, ಸಾಮಾನ್ಯರನ್ನಷ್ಟೇ ಅಲ್ಲದೇ ದೊಡ್ಡ ದೊಡ್ಡ ಸ್ಟಾರ್ ನಟ-ನಿರ್ದೇಶಕರನ್ನು ರೋಮಾಂಚಿತರಾಗಿಸಿದ್ದು, ಎಲ್ಲೆಡೆ ಈ ವಿಷಯವೇ ಹರಿದಾಡುತ್ತಿದೆ.










