• March 10, 2022

‘ಶಕ್ತಿಧಾಮ’ದಲ್ಲೊಂದು ಶಾಲೆ; ನನಸಾಗಲಿದೆ ಅಪ್ಪು ಕನಸು.

‘ಶಕ್ತಿಧಾಮ’ದಲ್ಲೊಂದು ಶಾಲೆ; ನನಸಾಗಲಿದೆ ಅಪ್ಪು ಕನಸು.

ರಾಜ್ ಕುಟುಂಬ ಸಮಾಜಸೇವಾ ಕಾರ್ಯಗಳಿಗೆ ಹೆಸರುವಾಸಿ. ಈ ಕುಟುಂಬದ ಪ್ರತಿಯೊಂದು ಕುಡಿಗಳು ಸಹ ಒಂದಲ್ಲ ಒಂದು ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ಕೊಡುತ್ತಾ ಬಂದಿದ್ದಾರೆ. ಇವರ ಸಮಾಜಸ್ನೇಹಿ ಕೆಲಸಗಳಲ್ಲೊಂದು ಮೈಸೂರಿನಲ್ಲಿರುವ ‘ಶಕ್ತಿಧಾಮ’. ಸುಮಾರು 24 ವರ್ಷಗಳ ಸುದೀರ್ಘ ಇತಿಹಾಸ ಇರೋ ಈ ಶಕ್ತಿಧಾಮ ಬಡ ಹೆಣ್ಣುಮಕ್ಕಳಿಗೆ ವಸತಿ, ಊಟಗಳನ್ನು ಉಚಿತವಾಗಿ ನೀಡುತ್ತಿದೆ. ಇದೊಂದು ಮಹಿಳಾ ಪುನರ್ವಸತಿ ಹಾಗು ಅಭಿವೃದ್ಧಿ ಕೇಂದ್ರ ಎನ್ನಬಹುದು. ಶೀಘ್ರದಲ್ಲೇ ಈ ಶಕ್ತಿಧಾಮದಲ್ಲಿ ಶಾಲೆಯೊಂದು ನಿರ್ಮಾಣವಾಗಲಿದೆಯಂತೆ.

1998ರಲ್ಲಿ ನಿರ್ಮಿತವಾಗಿ, 2000ನೇ ಇಸವಿಯಲ್ಲಿ ಕಾರ್ಯೋನ್ಮುಖವಾದ ಈ ‘ಶಕ್ತಿಧಾಮ’ ಇಲ್ಲಿಯವರೆಗೆ ಸುಮಾರು 4000 ವಿದ್ಯಾರ್ಥಿನಿಯರ ಬದುಕಿಗೆ ಬೆಳಕಾಗಿದೆ. ಪ್ರಸ್ತುತ ಸುಮಾರು 150 ವಿದ್ಯಾರ್ಥಿನಿಯರಿರುವ ಈ ‘ಶಕ್ತಿಧಾಮ’ದಲ್ಲಿ ಶಾಲೆಯೊಂದನ್ನ ಕಟ್ಟಬೇಕೆಂಬುದು ಪುನೀತ್ ರಾಜಕುಮಾರ್ ಅವರ ಆಸೆಯಾಗಿತ್ತಂತೆ. ಶೀಘ್ರದಲ್ಲೇ ಈ ಕನಸು ಸರ್ಕಾರದ ಅನುದಾನದೊಂದಿಗೆ ನನಸಾಗಲಿದೆ. ಇತ್ತೀಚಿನ ಬಜೆಟ್ ಒಂದರಲ್ಲಿ ಮಾನ್ಯ ಮುಖ್ಯಮಂತ್ರಿಗಳು ಶಕ್ತಿಧಾಮದಲ್ಲಿ ಶಾಲೆಯೊಂದನ್ನು ಕಟ್ಟಲು ಅನುದಾನವನ್ನು ಮೀಸಲಿಡುವುದಾಗಿ ಹೇಳಿದ್ದಾರೆ. ಈ ನಿರ್ಧಾರ ರಾಜ್ ಕುಟುಂಬಕ್ಕೆ ಸಂತಸ ತಂದಿದೆ.

ರಾಜಕುಮಾರ್ ಹಾಗು ಪಾರ್ವತಮ್ಮ ರಾಜಕುಮಾರ್ ದಂಪತಿಗಳು ಕಟ್ಟಿದ ಈ ‘ಶಕ್ತಿಧಾಮ’ವನ್ನು ನಿಧಾನರಾಗುವವರೆಗೆ ಪಾರ್ವತಮ್ಮ ಮುಂದಾಳತ್ವದಲ್ಲಿ ನೋಡಿಕೊಳ್ಳುತ್ತಿದರಂತೆ. ಪಾರ್ವತಮ್ಮ ನಮ್ಮನ್ನಗಲಿದ ನಂತರ ಶ್ರೀಮತಿ ಗೀತಾ ಶಿವರಾಜಕುಮಾರ್ ಅವರು ನಡೆಸಿಕೊಂಡು ಬಂದರು. ಕುಟುಂಬದ ಪ್ರತಿಯೊಬ್ಬರೂ ಸಹ ತಮ್ಮ ಸಂಪಾದನೆಯಲ್ಲೊಂದು ಪಾಲನ್ನು ಇದಕ್ಕಾಗಿ ಮೀಸಲಿಡುತ್ತಿದ್ದರು. ಅಪ್ಪು ಹಲವಾರು ಬಾರಿ ಈ ಶಕ್ತಿಧಾಮಕ್ಕೆ ಧನಸಹಾಯ ಮಾಡಿದ್ದರಂತೆ. ಶಿವಣ್ಣ ಒಮ್ಮೊಮ್ಮೆ ‘ಶಕ್ತಿಧಾಮ’ಕ್ಕೆ ಭೇಟಿಕೊಟ್ಟು ಮಕ್ಕಳೊಂದಿಗೆ ಆಡುತ್ತಿದರು, ಮಕ್ಕಳನ್ನ ಶೂಟಿಂಗ್ ಸ್ಥಳಕ್ಕೆ ಸಹ ಕರೆದೊಯ್ಯುತ್ತಿದರು. ಸದ್ಯ ಇಲ್ಲೊಂದು ಶಾಲೆಯಾದರೆ ಹಲವಾರು ಬಡವಿದ್ಯಾರ್ಥಿನಿಯರಿಗೆ ಅತೀವ ಸಹಾಯವಾಗಲಿದೆ.