• July 26, 2022

‘ಲಕ್ಕಿ ಮ್ಯಾನ್’ ಅಪ್ಪುವಿಗೆ ಇರಲಿದೆಯಾ ಅವರದೇ ಧ್ವನಿ!!

‘ಲಕ್ಕಿ ಮ್ಯಾನ್’ ಅಪ್ಪುವಿಗೆ ಇರಲಿದೆಯಾ ಅವರದೇ ಧ್ವನಿ!!

ಕರುನಾಡ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಟಿಸಿರುವ ಮುಂದಿನ ಸಿನಿಮಾ ‘ಲಕ್ಕಿ ಮ್ಯಾನ್’. ‘ಜೇಮ್ಸ್’ ಸಿನಿಮಾದಲ್ಲಿ ಅವರು ಕೊನೆಯ ಬಾರಿ ನಾಯಕರಾಗಿ ನಟಿಸಿದ್ದರೆ, ‘ಲಕ್ಕಿ ಮ್ಯಾನ್’ನಲ್ಲಿ ವಿಶೇಷ ಪಾತ್ರವೊಂದಾಗಿ ದೇವರಾಗಿ ನಟಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ ಈ ಚಿತ್ರದ ಟೀಸರ್ ನಿನ್ನೆ (ಜುಲೈ 25) ಬಿಡುಗಡೆಯಾಗಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಅಪ್ಪುವನ್ನು ಇನ್ನೊಮ್ಮೆ ತೆರೆಮೇಲೆ ಕಾಣಬಹುದು ಎಂಬ ಅಂಶವೇ ಅದೆಷ್ಟೋ ಕನ್ನಡಿಗರಿಗೆ ಸಂತಸ ನೀಡುತ್ತಿದೆ, ಇನ್ನೂ ಈ ಚಿತ್ರದ ಬಗೆಗಿನ ಇನ್ನಷ್ಟು ಮಾಹಿತಿಯನ್ನು ನಿರ್ದೇಶಕರಾದ ನಾಗೇಂದ್ರ ಪ್ರಸಾದ್ ಹೊರಬಿಟ್ಟಿದ್ದಾರೆ.

ದಶಕಗಳ ಹಿಂದೆ ಸ್ಯಾಂಡಲ್ವುಡ್ ನಲ್ಲಿ ನಾಯಕನಟನಾಗಿ ಗುರುತುಸಿಕೊಂಡಿದ್ದ ನಾಗೇಂದ್ರ ಪ್ರಸಾದ್ ಅವರು ‘ಲಕ್ಕಿ ಮ್ಯಾನ್’ ಸಿನಿಮಾದ ನಿರ್ದೇಶಕರು. ಇತ್ತೀಚೆಗಷ್ಟೇ ಖಾಸಗಿ ವಾಹಿನಿಯೊಂದಕ್ಕೆ ಇವರು ನೀಡಿದ್ದ ಸಂದರ್ಶನವೊಂದರಲ್ಲಿ ಸಿನಿಮಾದ ಚಿತ್ರೀಕರಣದ ಬಗೆಗೆ ಮಾತನಾಡಿದ ಇವರು, “ಅಪ್ಪು ಸರ್ ಆಶೀರ್ವಾದವೋ ಏನೋ ಎಂಬಂತೆ ತುಂಬಾ ಸರಾಗವಾಗಿ ಯಾವುದೇ ಸಮಸ್ಯೆಯಿಲ್ಲದೇ ನಮ್ಮ ಸಿನಿಮಾದ ಚಿತ್ರೀಕರಣ ನಡೆದುಹೋಯಿತು” ಎಂದಿದ್ದಾರೆ. “ಹಾಗಾದರೆ ನಿಮ್ಮ ಸಿನಿಮಾದಲ್ಲಿ ಅಪ್ಪು ಅವರ ಪಾತ್ರಕ್ಕೆ ಧ್ವನಿ ನೀಡಲು ಏನೂ ಮಾಡಿದಿರಿ, ಯಾರನ್ನು ಕೇಳಿದಿರಿ?” ಎಂದು ಸಂದರ್ಶಕರು ಕೇಳಿದ ಪ್ರಶ್ನೆಗೆ “ನಾನು ಸಂತಸದಿಂದ ಹೇಳಿಕೊಳ್ಳುತ್ತೇನೆ. ‘ಲಕ್ಕಿ ಮ್ಯಾನ್’ ಸಿನಿಮಾದಲ್ಲಿ ಪುನೀತ್ ಸರ್ ಪಾತ್ರಕ್ಕೆ ಅವರದೇ ಧ್ವನಿಯಿರುತ್ತದೆ. ಬೇರಾರದೋ ಧ್ವನಿಯಿಲ್ಲ. ಅಭಿಮಾನಿಗಳು ಅಪ್ಪು ಸರ್ ಧ್ವನಿಯಲ್ಲಿಯೇ ಸಿನಿಮಾ ನೋಡಬಹುದು ಎಂದಿದ್ದಾರೆ. ಸೆಪ್ಟೆಂಬರ್ ಗೆ ಸಿನಿಮಾ ಬಿಡುಗಡೆ ಮಾಡುವ ತಯಾರಿಯಲ್ಲಿದ್ದೇವೆ ” ಎಂದೂ ಹೇಳಿದ್ದಾರೆ.