- July 8, 2022
ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ ಅನೂಪ್ ಭಂಡಾರಿ..


‘ರಂಗಿತರಂಗ’ ನಿರ್ದೇಶಕ ಅನೂಪ್ ಭಂಡಾರಿ ಯಾರಿಗೆ ತಾನೇ ಗೊತ್ತಿಲ್ಲ? ಈಗಂತೂ ವಿಕ್ರಾಂತ್ ರೋಣದ ಮೂಲಕ ಎಲ್ಲಾ ಕಡೆ ಸುದ್ದಿಯಲ್ಲಿದ್ದಾರೆ. ಇದಕ್ಕೊಂದು ಹೊಸ ಸೇರ್ಪಡೆ ಎಂಬಂತೆ ಅನೂಪ್ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಅನೂಪ್ ಭಂಡಾರಿ ಚಿತ್ರರಂಗಕ್ಕೆ ಕಾಲಿರಿಸಿ ಏಳು ವರ್ಷಗಳೇ ಕಳೆದಿವೆ. ಆದರೆ ಅವರು ಮಾಡಿದ್ದು ಬರೀ ಮೂರು ಸಿನಿಮಾಗಳನ್ನು ಮಾತ್ರ. 2015ರಲ್ಲಿ ತೆರೆಕಂಡ ರಂಗಿತರಂಗ ಅವರಿಗೆ ಚಿತ್ರರಂಗದಲ್ಲಿ ಭದ್ರಬುನಾದಿ ಹಾಕಿ ಕೊಟ್ಟಿತು. ಈಗ ಅವರು ಬಾಲಿವುಡ್ ಗೆ ಹಾರಹೊರಟಿರುವುದಕ್ಕೂ ರಂಗಿತರಂಗವೇ ಕಾರಣ.


ಸಂಪೂರ್ಣ ಹೊಸಬರು ಸೇರಿ ಮಾಡಿದ್ದ ಸಿನಿಮಾವೊಂದು ಸೂಪರ್ ಹಿಟ್ ಆಗಿತ್ತು. ಅದರ ಮೂಲಕ ಅನೂಪ್ ಭಂಡಾರಿ ಉತ್ತಮ ನಿರ್ದೇಶಕ ಎಂದು ಗುರುತಿಸಿಕೊಳ್ಳುವುದರೊಂದಿಗೆ ನಿರೂಪ್ ಭಂಡಾರಿ ನಾಯಕನಾಗಿ ಮಿಂಚಿದರು. ಹಾಗೆಯೇ ರಾಧಿಕಾ ನಾರಾಯಣ್ ಮತ್ತು ಆವಂತಿಕಾ ಅವರಿಗೂ ಅದು ಮೊದಲ ಸಿನಿಮಾವಾಗಿತ್ತು. ಮೊದಲ ಪ್ರಯತ್ನದಲ್ಲೇ ಭೇಷ್ ಎನಿಸಿಕೊಂಡ ರಂಗಿತರಂಗ ಇದೀಗ ಹಿಂದಿಯಲ್ಲಿ ರಿಮೇಕ್ ಆಗಲು ಸಜ್ಜಾಗಿ ನಿಂತಿದೆ.


ಅಂದಹಾಗೆ ಬಾಲಿವುಡ್ ನಲ್ಲಿ ರಂಗಿತರಂಗದ ನಾಯಕನಾಗಿ ಅಕ್ಷಯ್ ಕುಮಾರ್ ಅಥವಾ ಶಾಹಿದ್ ಕಪೂರ್ ನಟಿಸುವ ಸಾಧ್ಯತೆ ಇದೆ ಎಂದು ಕೇಳಿ ಬರುತ್ತಿದೆ. ಇದರ ಬಗ್ಗೆ ಇನ್ನೂ ಯಾವುದೇ ಅಧಿಕೃತವಾದ ಮಾಹಿತಿ ಲಭಿಸಿಲ್ಲ.
ಅಂದು ರಂಗಿತರಂಗ ತೆರೆಕಂಡ ಸಮಯದಲ್ಲೇ ಬಾಹುಬಲಿಯೂ ಬಂದಿತ್ತು. ಆದರೂ ಸಾಕಷ್ಟು ಉತ್ತಮ ಪ್ರತಿಕ್ರಿಯೆಯನ್ನು ರಂಗಿತರಂಗ ಪಡೆದುಕೊಂಡಿತ್ತು. ಥಿಯೇಟರ್ ಗಳಲ್ಲಿ 300 ದಿನ ಪ್ರದರ್ಶನ ಕಂಡು 2 ಮಲ್ಟಿಫ್ಲೆಕ್ಸ್ ಗಳಲ್ಲಿ ಒಂದು ವರ್ಷ ತೆರೆ ಕಂಡ ದಾಖಲೆಯೊಂದಿಗೆ ವಿದೇಶದಲ್ಲೂ ರಂಗಿತರಂಗ ಉತ್ತಮ ಸಿನಿಮಾ ಎನಿಸಿಕೊಂಡಿತ್ತು. ಸಾಕಷ್ಟು ಪ್ರಶಸ್ತಿಗಳು ಕೂಡ ಇದನ್ನರಸಿ ಬಂದಿದ್ದವು.




ರಂಗಿತರಂಗ ನಂತರ ‘ರಾಜರಥ’ ನಿರ್ದೇಶನ ಮಾಡಿದ ಅನೂಪ್ ಭಂಡಾರಿ ಈಗ ವಿಕ್ರಾಂತ್ ರೋಣಾ ದ ಮೂಲಕ ಮತ್ತೆ ಮರಳಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ವಾಗಿರುವ ವಿಕ್ರಾಂತ್ ರೋಣ ಈಗಾಗಲೇ ಹಾಡು, ಟ್ರೇಲರ್ ಮುಖಾಂತರ ಎಲ್ಲೆಡೆ ಕುತೂಹಲ ಸೃಷ್ಟಿ ಮಾಡಿದೆ. ಇದಲ್ಲದೆ ಅನೂಪ್ ಸುದೀಪ್ ರೊಂದಿಗೆ ‘ಬಿಲ್ಲರಂಗ ಭಾಷಾ’ ಎನ್ನುವ ಸಿನಿಮಾ ಕೂಡ ಮಾಡುವ ಸಾಧ್ಯತೆ ಇದೆ.






