• July 12, 2022

ಸುದೀಪ್ ಅವರೊಂದಿಗೆ ಸಿನಿಮಾ ಮಾಡುವುದು ನನ್ನ 26 ವರ್ಷಗಳ ಕನಸು – ಅನೂಪ್ ಭಂಡಾರಿ

ಸುದೀಪ್ ಅವರೊಂದಿಗೆ ಸಿನಿಮಾ ಮಾಡುವುದು ನನ್ನ  26 ವರ್ಷಗಳ ಕನಸು – ಅನೂಪ್ ಭಂಡಾರಿ

ಜುಲೈ 28 ರಂದು ತೆರೆ ಕಾಣಲಿರುವ ವಿಕ್ರಾಂತ್ ರೋಣಾ ಚಿತ್ರಕ್ಕಾಗಿ ಅಭಿಮಾನಿಗಳೆಲ್ಲ ಕಾತುರದಿಂದ ಕಾಯುತ್ತಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ಅನೂಪ್ ಭಂಡಾರಿ ತಮ್ಮ ಬಹು ವರ್ಷದ ಕನಸಿನ ಕೂಸಾದ ವಿಕ್ರಾಂತ್ ರೋಣಾದ ಬಗ್ಗೆ ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ.

ಸುದೀಪ್ ಅವರೊಂದಿಗೆ ಒಂದು ಸಿನಿಮಾವನ್ನಾದರೂ ಮಾಡಬೇಕೆನ್ನುವುದು ಅದೆಷ್ಟೋ ನಿರ್ದೇಶಕರ ಕನಸಾಗಿರುತ್ತದೆ. ಆದರೆ ಅನೂಪ್ ಭಂಡಾರಿ ಅವರು ಸುದೀಪ್ ಜೊತೆ ಸಿನಿಮಾ ಮಾಡಬೇಕೆಂದುಕೊಂಡಿದ್ದು ಇಂದು ನಿನ್ನೆಯಲ್ಲ, ಬರೋಬ್ಬರಿ 26 ವರ್ಷಗಳ ಹಿಂದೆ. ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಮಾತನಾಡಿದ ಅನೂಪ್ ಭಂಡಾರಿ ”ವಿಕ್ರಾಂತ್ ರೋಣಾದ ಮೂಲಕ ಸುದೀಪ್ ಅವರೊಂದಿಗೆ ಕೆಲಸ ಮಾಡುವ ನನ್ನ ಕನಸು ನನಸಾಗುತ್ತಿದೆ” ಎಂದರು.

ಅನೂಪ್ ಭಂಡಾರಿ ಹೇಳುವ ಪ್ರಕಾರ 26 ವರ್ಷಗಳ ಹಿಂದೆ ತಮ್ಮ ತಂದೆಯ ಡ್ರಾಯರ್ ನಲ್ಲಿ ಅವರು ಸುದೀಪ್ ಅವರ ಭಾವಚಿತ್ರವನ್ನು ನೋಡಿದರಂತೆ.
ಆಶ್ಚರ್ಯಕರವಾಗಿ ಸುದೀಪ್ ಅಂದು ಅಭಿನಯಿಸಿದ್ದ ಧಾರಾವಾಹಿಯೊಂದರಲ್ಲಿ ಅನೂಪ್ ಭಂಡಾರಿಯವರ ತಂದೆ ಬಂಡವಾಳ ಹೂಡಿದ್ದರು.

ಅನೂಪ್ ಭಂಡಾರಿ ಮಾತನಾಡುತ್ತಾ ”ನಾನು ತಂದೆಗೆ ಅಂದೇ ಕೇಳಿದ್ದೆ. ಸುದೀಪ್ ಅವರದ್ದು ತುಂಬಾ ಸ್ಮ್ರಾರ್ಟ್ ವ್ಯಕ್ತಿತ್ವ. ನೀವೇಕೆ ಅವರೊಂದಿಗೆ ಒಂದು ಸಿನಿಮಾ ನಿರ್ಮಾಣ ಮಾಡಬಾರದೆಂದು? ದುರದೃಷ್ಟವಶಾತ್ ನನ್ನ ತಂದೆ ಆನಂತರ ಸಿನಿಮಾ ನಿರ್ಮಾಣ ಮಾಡಲೇ ಇಲ್ಲ. ಆದರೆ ನಾನು ಇಂದು ಸುದೀಪ್ ಅವರೊಂದಿಗೆ ಕೆಲಸ ಮಾಡುತ್ತಿದ್ದೇನೆ” ಎಂದು ಖುಷಿ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ವಿಕ್ರಾಂತ್ ರೋಣಾ ಟ್ರೈಲರ್ ನೋಡಿದವರೆಲ್ಲಾ ಅನೂಪ್ ಭಂಡಾರಿಯವರ ಪರಿಶ್ರಮವನ್ನು ಕೊಂಡಾಡಿದ್ದಾರೆ. ಕಿಚ್ಚ ಸುದೀಪ್, ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್ ಅಭಿನಯದ 3D ಸಿನಿಮಾ ನೋಡಲು ಎಲ್ಲರೂ ಕಾತರರಾಗಿದ್ದಾರೆ. ಜುಲೈ 28ರಂದು ಇನ್ನೊಂದು ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಯಾಗಲು ಸಜ್ಜಾಗಿ ನಿಂತಿದೆ.