• March 26, 2022

ರಾಧೆಯಾಗಿ ಮೋಡಿ ಮಾಡಿದ ಚಂದನವನದ ಚೆಲುವೆ

ರಾಧೆಯಾಗಿ ಮೋಡಿ ಮಾಡಿದ ಚಂದನವನದ ಚೆಲುವೆ

ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಅನು ಪ್ರಭಾಕರ್ ಹೃದಯಾ ಹೃದಯಾ ಸಿನಿಮಾದ ಮೂಲಕ ನಾಯಕಿಯಾಗಿ ಭಡ್ತಿ ಪಡೆದರು. ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಅನು ಪ್ರಭಾಕರ್ ಗರ್ಭಿಣಿಯಾದ ಕಾರಣ ತಾತ್ಕಾಲಿಕವಾಗಿ ಚಿತ್ರರಂಗಕ್ಕೆ ವಿದಾಯ ಹೇಳಿದ್ದರು. ಮಗಳು ನಂದನಾ ಳ ಆರೈಕೆ, ಪಾಲನೆ ಪೋಷಣೆ ಒಟ್ಟಾರೆಯಾಗಿ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದ ಅನು ಪ್ರಭಾಕರ್ ಮತ್ತೆ ನಟನೆಯತ್ತ ಮುಖ ಮಾಡಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ನಲ್ಲಿ ವಿಲನ್ ಶ್ರೀಕಾಂತ್ ಮಡದಿಯಾಗಿ ನಟಿಸಿದ್ದ ಅನು ಪ್ರಭಾಕರ್ ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆಯುತ್ತಿದ್ದಾರೆ. ಹಿರಿತೆರೆ ಮಾತ್ರವಲ್ಲದೇ ಕಿರುತೆರೆಯಲ್ಲಿಯೂ ಕೂಡಾ ಮೋಡಿ ಮಾಡುತ್ತಿರುವ ಈಕೆ ತೀರ್ಪುಗಾರ್ತಿಯಾಗಿ ಮಿಂಚುತ್ತಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋವಿನ ತೀರ್ಪುಗಾರ್ತಿಯಾಗಿ ಕಿರುತೆರೆಯಲ್ಲಿ ಕಮಾಲ್ ಮಾಡುತ್ತಿರುವ ಅನು ಪ್ರಭಾಕರ್ ಇದೀಗ ನಟನೆಯ ಹೊರತಾಗಿಯೂ ಸದ್ದು ಮಾಡುತ್ತಿದ್ದಾರೆ. ಅದು ಫೋಟೋಶೂಟ್ ಮೂಲಕ.

ಅನು ಪ್ರಭಾಕರ್ ಬಹು ದಿನಗಳ ನಂತರ ಫೋಟೋಶೂಟ್ ಮಾಡಿಸಿಕೊಂಡಿದ್ದು ಇನ್ ಸ್ಟಾಗ್ರಾಂನಲ್ಲಿ ಸಕತ್ ಸದ್ದು ಮಾಡುತ್ತಿದ್ದಾರೆ. ರಾಧೆಯ ಅವತಾರದಲ್ಲಿ ಫೋಟೋಶೂಟ್ ಮಾಡಿಸಿಕೊಂಡಿರುವ ಅನು ಪ್ರಭಾಕರ್ ಅವರ ಈ ಅವತಾರ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಗುಲಾಬಿ ಮತ್ತು ತಿಳಿ ನೀಲಿ ಬಣ್ಣದ ಲೆಹೆಂಗಾದಲ್ಲಿ ನಟಿ ಅನು ಪ್ರಭಾಕರ್ ಮಿಂಚಿದ್ದು ನೆಚ್ಚಿನ ನಟಿಯ ಫೋಟೋಶೂಡ್ ಕಂಡು ಅಭಿಮಾನಿಗಳು ಮನ ಮಸೋತಿದ್ದಾರೆ.