• June 16, 2022

ದೆವ್ವದ ಜೊತೆ ಡುಯೆಟ್ ಆಡ್ತಾರಾ ಅನೀಶ್!!

ದೆವ್ವದ ಜೊತೆ ಡುಯೆಟ್ ಆಡ್ತಾರಾ ಅನೀಶ್!!

‘ಅಕಿರಾ’ ಸಿನಿಮಾದಿಂದ ಸ್ಯಾಂಡಲ್ವುಡ್ ನಲ್ಲಿ ತಮ್ಮ ಹೆಸರನ್ನು ದಪ್ಪ ಹೆಸರಿನಲ್ಲಿ ಬರೆಸಿರೋ ನಟ ಅನೀಶ್, ಕನ್ನಡದ ಭರವಸೆ ಹುಟ್ಟಿಸಿರೋ ಯುವನಟರುಗಳಲ್ಲಿ ಒಬ್ಬರು. ಸುಮಾರು ಒಂದು ದಶಕದಿಂದ ಚಂದನವನದಲ್ಲಿ ನಿರತರಾಗಿರುವ ಇವರು, ಅಪಾರ ಅಭಿಮಾನಿಗಳನ್ನ ಹೊಂದಿದ್ದಾರೆ. ಇದೀಗ ಅವರ ನಟನೆಯ 10ನೇ ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು, ಎಲ್ಲೆಡೆ ಭರ್ಜರಿ ಪ್ರಚಾರ ಕಾರ್ಯಗಳು ನಡೆಯುತ್ತಿವೆ.

ಎ ಆರ್ ಶಾನ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಬೆಂಕಿ’ ಸಿನಿಮಾ ಅನೀಶ್ ಅಭಿನಯದ 10ನೇ ಸಿನಿಮಾ ಆಗಿರಲಿದೆ. ತಮ್ಮದೇ ‘ವಿಂಕ್ ವಿಸಿಲ್ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ಅನೀಶ್ ಅವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಇದೇ ಜುಲೈ 15ಕ್ಕೆ ಸಿನಿಮಾ ಚಿತ್ರರಂಗಗಳಿಗೆ ಹೆಜ್ಜೆ ಇಡಲಿದೆ. ಈಗಾಗಲೇ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಪಕ್ಕ ಮಾಸ್ ಕಮರ್ಷಿಯಲ್ ಎಂಟರ್ಟೈನರ್ ಎಂಬ ಪಟ್ಟವನ್ನು ಅಭಿಮಾನಿಗಳಿಂದ ಪಡೆಯುತ್ತಿದೆ. ಅಣ್ಣ-ತಂಗಿಯ ಭಾಂದವ್ಯ, ಸ್ನೇಹಗಳ ಕಥೆ ಹೇಳುವ ಹಳ್ಳಿ ಹಿನ್ನೆಲೆಯ ಈ ಸಿನಿಮಾದಲ್ಲಿ ದೆವ್ವದ ಅಂಶವು ಟ್ರೈಲರ್ ನಲ್ಲಿ ಕಾಣುತ್ತಿದೆ .’ರೈಡರ್’ ಸಿನಿಮಾದಲ್ಲಿ ನಟಿಸಿದ್ದ ಸಂಪದ ಹುಲಿವಾನ ಅವರು ಅನೀಶ್ ಅವರಿಗೆ ಜೋಡಿಯಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟ್ರೈಲರ್ ನಲ್ಲಿ ಚಿತ್ರದ ನಾಯಕಿಯನ್ನೇ ದೆವ್ವ ಎಂಬ ರೀತಿ ತೋರಿಸಿರುವುದರಿಂದ ಅನೀಶ್ ದೆವ್ವದ ಜೊತೆ ಡುಯೆಟ್ ಹಾಡುತ್ತಾರ ಎಂಬ ಪ್ರಶ್ನೆ ಅಭಿಮಾನಿಗಳದ್ದು. ಜೊತೆಗೆ ಶೃತಿ ಪಾಟೀಲ್, ಅಚ್ಯುತ್ ಕುಮಾರ್, ಹರಿಣಿ, ಸಂಪತ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಅನೀಶ್ ತೇಜೇಶ್ವರ್ ಕನ್ನಡದಲ್ಲಿ ಹಲವಾರು ಯುವ ಅಭಿಮಾನಿಗಳನ್ನು ಪಡೆದಿದ್ದಾರೆ. ಈಗಾಗಲೇ ವಿವಿಧೆಡೆ ಸಿನಿಮಾದ ಪ್ರಚಾರ ಕಾರ್ಯಗಳು ನಡೆಯುತ್ತಿದ್ದು, ಸದ್ಯ ಚಿತ್ರತಂಡ ಹಾಸನದ ವಿವಿಧ ಕಾಲೇಜುಗಳಿಗೆ ಭೇಟಿ ನೀಡುತ್ತಿದೆ. ಇದೇ ಜುಲೈ 15ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದ್ದು, ಈ ಚಿತ್ರದ ಮೂಲಕ ದೊಡ್ಡ ಯಶಸ್ಸು ಪಡೆವ ನಂಬಿಕೆಯಲ್ಲಿದ್ದಾರೆ ನಟ-ನಿರ್ಮಾಪಕ ಅನೀಶ್ ತೇಜೇಶ್ವರ್.