- April 5, 2022
ಕಿರುತೆರೆಯ ನಟನಾ ಮಣಿಯರ ವಿಶೇಷ ವಿಷಯಗಳೇನು ಗೊತ್ತಾ…


ರಿಯಾಲಿಟಿ ಶೋ ಎಂದ ಮೇಲೆ ಅಲ್ಲಿ ನಿರೂಪಕ ನಿರೂಪಕಿಯಿರಲೇಬೇಕು. ನಿರೂಪಕಿಯರು ಎಂದ ಕೂಡಲೇ ನೆನಪಾಗುವ ಹೆಸರು ಅನುಶ್ರೀ, ಶಾಲಿನಿ ಸತ್ಯನಾರಾಯಣ, ಸುಷ್ಮಾ ರಾವ್. ಪಟಪಟನೆ ಮಾತನಾಡುತ್ತಾ ವೀಕ್ಷಕರನ್ನು ಸ್ವಾಗತಿಸುವ ನಿರೂಪಕಿಯರು ರಿಯಾಲಿಟಿ ಶೋ ವಿನ ಶೋಭೆ ಹೌದು. ಅನುಶ್ರೀ, ಶಾಲಿನಿ, ಸುಷ್ಮಾ ಹೊರತಾಗಿ ನಿರೂಪಕಿಯರಾಗಿ ಮೋಡಿ ಮಾಡಿರುವ ಚೆಲುವೆಯರು ಇದ್ದಾರೆ. ಹೌದು, ನಟನೆಯ ಮೂಲಕ ಕಿರುತೆರೆಯಲ್ಲಿ ಮಿಂಚಿದ ಈ ನಟನಾಮಣಿಯರು ನಿರೂಪಕಿಯರಾಗಿಯೂ ಸೈ ಎನಿಸಿಕೊಂಡಿದ್ದಾರೆ. ಅವರೆಲ್ಲಾ ಯಾರು ಎಂಬುದರ ಸಣ್ಣ ಝಲಕ್ ಇಲ್ಲಿದೆ.
ಅನುಪಮಾ ಗೌಡ
ಸದ್ಯ ಕಿರುತೆರೆಯಲ್ಲಿ ಆ್ಯಕ್ಟೀವ್ ಆಗಿರುವ ನಿರೂಪಕಿ ಪೈಕಿ ಈಕೆಯೂ ಒಬ್ಬರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನಮ್ಮ ಸೂಪರ್ ಸ್ಟಾರ್ ನ ನಿರೂಪಕಿಯಾಗಿ ಮನ ಸೆಳೆಯುತ್ತಿರುವ ಅನುಪಮಾ ಗೌಡ ನಟನೆಗೆ ಮುನ್ನುಡಿ ಬರೆದುದು ಅಣ್ಣ ತಂಗಿ. ಮುಂದೆ ಚಿ.ಸೌ.ಸಾವಿತ್ರಿ, ಅಕ್ಕ ಧಾರಾವಾಹಿಯಲ್ಲಿ ನಟಿಸಿದ್ದ ಅನುಪಮಾ ಗೌಡ ಕನ್ನಡ ಕೋಗಿಲೆ ರಿಯಾಲಿಟಿ ಶೋ ಮೂಲಕ ನಿರೂಪಕಿಯಾಗಿ ಭಡ್ತಿ ಪಡೆದರು. ಮುಂದೆ ಮಜಾಭಾರತ, ರಾಜ ರಾಣಿ ಶೋ ವಿನ ನಿರೂಪಕಿಯಾಗಿದ್ದ ಈಕೆ ಇದೀಗ ನನ್ನಮ್ಮ ಸೂಪರ್ ಸ್ಟಾರ್ ನ ನಿರೂಪಣೆ ಮಾಡುತ್ತಿದ್ದಾರೆ.




ಭೂಮಿ ಶೆಟ್ಟಿ
ಕಿನ್ನರಿ ಧಾರಾವಾಹಿಯ ಮಣಿಯಾಗಿ ಕಿರುತೆರೆಗೆ ಪಾದಾರ್ಪಣೆ ಮಾಡಿರುವ ಭೂಮಿ ಶೆಟ್ಟಿ ಇದೀಗ ವೆಬ್ ಸಿರೀಸ್, ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಜಾಭಾರತ ಸೀಸನ್ 3ರ ನಿರೂಪಕಿಯಾಗಿ ಕಾಣಿಸಿಕೊಂಡಿದ್ದ ಭೂಮಿ ಶೆಟ್ಟಿ ನಿರೂಪಕಿಯಾಗಿ ಕಿರುತೆರೆಗೆ ಕಂ ಬ್ಯಾಕ್ ಮಾಡಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾಭಾರತ ಸೀಸನ್ 3 ರ ನಿರೂಪಕಿಯಾಗಿ ಕಾಣಿಸಿಕೊಂಡಿದ್ದ ಈಕೆ ನಟನೆಯ ಹೊರತಾಗಿ ಮಾತಿನ ಮೂಲಕವೂ ಪ್ರೇಕ್ಷಕರ ಮನ ಸೆಳೆದ ಗಟ್ಟಿಗಿತ್ತಿ. ಮುಂದೆ ತೆಲುಗು ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಾಗ ನಿರೂಪಣೆಗೆ ವಿದಾಯ ಹೇಳಿದರು.




ಚಂದನಾ ಅನಂತಕೃಷ್ಣ
ರಾಜ ರಾಣಿ ಧಾರಾವಾಹಿಯಲ್ಲಿ ನಾಯಕಿ ಚುಕ್ಕಿ ಆಲಿಯಾಸ್ ಯಡವಟ್ಟು ರಾಣಿಯಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಯಲ್ಲಿ ಕಮಾಲ್ ಮಾಡಿದ ಚಂದನಾ ಕೂಡಾ ನಿರೂಪಕಿಯಾಗಿ ಮಿಂಚಿದ ಪ್ರತಿಭೆ. ಹೂಮಳೆ ಧಾರಾವಾಹಿಯಲ್ಲಿ ನಾಯಕಿ ಲಹರಿಯಾಗಿ ನಟಿಸಿದ್ದ ಈಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಾಡು ಕರ್ನಾಟಕ ದ ನಿರೂಪಣೆ ಮಾಡಿ ಸೈ ಎನಿಸಿಕೊಂಡರು. ಆದರೆ ಕೋವಿಡ್ ಕಾರಣದಿಂದ ಆ ಶೋ ಅರ್ಧದಲ್ಲಿಯೇ ನಿಂತಿತ್ತು.




ಅಂಕಿತಾ ಅಮರ್
ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ನಾಯಕಿ ಮೀರಾ ಆಲಿಯಾಸ್ ಕೋಳಿ ಮರಿಯಾಗಿ ನಟಿಸಿದ್ದ ಅಂಕಿತಾ ಅಮರ್ ಕೂಡಾ ನಿರೂಪಣಾ ಕ್ಷೇತ್ರದಲ್ಲಿ ಮೋಡಿ ಮಾಡಿದ್ದಾರೆ. ಬಾಲನಟಿಯಾಗಿ ಬಣ್ಣದ ಲೋಮದ ನಂಟು ಬೆಳೆಸಿಕೊಂಡು ಇಂದು ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿರುವ ಅಂಕಿತಾ ಅಮರ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಎದೆ ತುಂಬಿ ಹಾಡುವೆನು ಹೊಸ ಸೀಸನ್ ನ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. ಇದೇ ಮೊದಲ ಬಾರಿಗೆ ಆಕೆ ನಿರೂಪಣೆಗೆ ಕಾಲಿಟ್ಟಿದ್ದರೂ ತಮ್ಮ ಮಾತು, ನಡವಳಿಕೆ ಮೂಲಕ ವೀಕ್ಷಕರ ಮನ ಸೆಳೆದಿದ್ದರು.






