• July 22, 2022

ನೆರೆರಾಜ್ಯದಲ್ಲೂ ಆರಂಭವಾಯ್ತು ಅಪ್ಪು ಹೆಸರಿನ ಅವಾರ್ಡ್.

ನೆರೆರಾಜ್ಯದಲ್ಲೂ ಆರಂಭವಾಯ್ತು ಅಪ್ಪು ಹೆಸರಿನ ಅವಾರ್ಡ್.

ಕನ್ನಡದ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡಿಗರ ಮನ ಹಾಗು ಮನೆಗಳlli ದೇವರಾಗಿ ಉಳಿದುಕೊಂಡಿದ್ದಾರೆ. ಅವರ ಜೀವ ನಮ್ಮನ್ನಗಲಿ ಹೋದರು, ಎಂದೂ ಮಾಸದ ಅವರ ನಗು, ಶಿಖರದೆತ್ತರದ ಅವರ ವ್ಯಕ್ತಿತ್ವ ಎಂದೆಂದಿಗೂ ಅಜರಾಮರ. ಸದ್ಯ ಇದಕ್ಕೆ ಸಾಕ್ಷಿಯಾಗಿ ನಮ್ಮ ನೆರೆರಾಜ್ಯದಲ್ಲಿ ಅಪ್ಪು ಹೆಸರಿನ ಪ್ರಶಸ್ತಿಯೊಂದನ್ನು ನೀಡಲಾಗುತ್ತಿದೆ. ಅಪ್ಪು ಅವರ ಕೀರ್ತಿ ನಮ್ಮಲ್ಲಷ್ಟೇ ಅಲ್ಲದೇ ಹೊರರಾಜ್ಯಗಳಲ್ಲೂ ಜೀವಂತ ಎಂಬುದನ್ನು ಈ ಘಟನೆ ಸಾರಿ ಹೇಳುತ್ತಿದೆ.

ತಮಿಳುನಾಡಿನ ಚಿತ್ರರಂಗದ ಉನ್ನತ ಪ್ರಶಸ್ತಿಯಾದ ‘ದಿ ಗಲ್ಲಾಟ ಕ್ರೌನ್-2022’ ರ ಪ್ರಧಾನ ಸಮಾರಂಭ ಇತ್ತೀಚಿಗಷ್ಟೇ ನಡೆದಿದೆ. ಈ ಪ್ರತಿಷ್ಟಿತ ಪ್ರಶಸ್ತಿಯಲ್ಲಿ ಅಪ್ಪು ಹೆಸರಿನ ಅವಾರ್ಡ್ ಒಂದನ್ನು ನೀಡಲು ಈ ಬಾರಿಯಿಂದ ಸಂಸ್ಥೆ ಆರಂಭ ಮಾಡಿದೆ. ‘ಪುನೀತ್ ರಾಜಕುಮಾರ್ ಸ್ಪೆಷಲ್ ಅಚೀವ್ಮೆಂಟ್’ ಎಂಬ ಹೆಸರಿನಲ್ಲಿ ಹೊಸ ಪ್ರಶಸ್ತಿಯೊಂದನ್ನು ನೀಡಲು ಶುರು ಮಾಡಿದ್ದು, ಮೊದಲ ಪ್ರಶಸ್ತಿಯನ್ನ ತಮಿಳಿನ ಖ್ಯಾತ ನಟ ಆರ್ಯ ಅವರಿಗೆ ನೀಡಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಪುನೀತ್ ರಾಜಕುಮಾರ್ ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಸ್ವತಃ ಅವರೇ ಪ್ರಶಸ್ತಿಯನ್ನು ಆರ್ಯ ಅವರಿಗೆ ಹಸ್ತಾಂತರಿಸಿದರು. ‘ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ, ಅಶ್ವಿನಿ ಅವರ ಕೈಯಲ್ಲಿ ಪ್ರಶsti ಪಡೆದದ್ದಕ್ಕೆ ಆರ್ಯ ಅವರು ಸಂತಸ ವ್ಯಕ್ತಪಡಿಸಿ, ಅಪ್ಪು ಅವರ ವ್ಯಕ್ತಿತ್ವವನ್ನು ಹಾಡಿಹೊಗಳಿದರು. “ಪುನೀತ್ ಅವರ ಸಾಧನೆ, ಅವರ ನಟನೆ, ನೃತ್ಯ, ಆಕ್ಷನ್ ಎನರ್ಜಿಗಳ ಲೆಕ್ಕದಲ್ಲಿ ನಾವು 5% ಕೂಡ ಇಲ್ಲ. ಇಡೀ ಚಿತ್ರರಂಗಕ್ಕೇ ಸಾಕಾಗುವಷ್ಟು ಶಕ್ತಿ ಅವರಲ್ಲಿತ್ತು. ಅವರ ಹೆಸರಿನ ಪ್ರಶಸ್ತಿ ಪಡೆಯುತ್ತಿರುವುದು ಹೆಮ್ಮೆಯ ಸಂಗತಿ” ಎಂದು ಆರ್ಯ ಅವರು ಹಂಚಿಕೊಂಡಿದ್ದಾರೆ.

ಇದಷ್ಟೇ ಅಲ್ಲದೇ, ಅದೇ ಸಮಾರಂಭದಲ್ಲಿ ಅಪ್ಪು ಅವರಿಗೂ ಒಂದು ಪ್ರಶಸ್ತಿ ನೀಡಿ ಗೌರವಿಸಲಾಯಿತು. ‘ಯುವರತ್ನ’ ಸಿನಿಮಾದ ನಟನೆಗಾಗಿ ಅಪ್ಪು ಅವರಿಗೆ ಪ್ರಶಸ್ತಿ ನೀಡಿದ್ದು, ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅವಾರ್ಡ್ ಅನ್ನು ಸ್ವೀಕರಿಸಿದರು.