• March 12, 2022

ಬೆಂಗಳೂರು ಸಿನಿಮೋತ್ಸವ. ಪ್ರಶಸ್ತಿ ಪಡೆದ ಎಲ್ಲ ಕನ್ನಡ ಸಿನಿಮಾಗಳು

ಬೆಂಗಳೂರು ಸಿನಿಮೋತ್ಸವ. ಪ್ರಶಸ್ತಿ ಪಡೆದ ಎಲ್ಲ ಕನ್ನಡ ಸಿನಿಮಾಗಳು

ಮಾರ್ಚ್ 3ನೇ ತಾರೀಕಿನಂದು ಚಾಲನೆಗೊಂಡಿದ್ದ 2022ನೇ ಸಾಲಿನ ‘ಬೆಂಗಳೂರು ಅಂತರ್ರಾಷ್ಟ್ರೀಯ ಸಿನಿಮೋತ್ಸವ’ ಮಾರ್ಚ್ 10ನೇ ತಾರೀಕಿನಂದು ಮುಕ್ತಾಯ ಕಂಡಿದೆ. ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಉಪಸ್ಥಿತಿಯಲ್ಲಿ ನೆರವೇರಿದ ಉದ್ಘಾಟನಾ ಸಮಾರಂಭದಿಂದ ಆರಂಭವಾದ ಸಿನಿ ಉತ್ಸವ ಕರುನಾಡ ರಾಜ್ಯಪಾಲರಾದ ತಾವರ್ ಚಂದ್ ಗೆಹಲೊಟ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದೊಂದಿಗೆ ಸಂಪೂರ್ಣಗೊಂಡಿದೆ.

2020 ಹಾಗು 2021ನೇ ಸಾಲಿನಲ್ಲಿ ಬಂದಂತಹ ಉತ್ತಮ ಚಿತ್ರಗಳನ್ನ ಗುರುತಿಸಿ, ಗೌರವಿಸಿ, ಪ್ರಶಸ್ತಿ ಪ್ರಧಾನವನ್ನ ಬೆಂಗಳೂರು ಸಿನಿಮೋತ್ಸವದಲ್ಲಿ ಮಾಡಲಾಗಿದೆ. ಆಗಮಿಸಿದ್ದ ಗಣ್ಯರುಗಳ ಕೈಯಿಂದ ಪುರಸ್ಕೃತರಾದ ಚಿತ್ರತಂಡಗಳು ತಾವು ಪಡೆದ ಪ್ರಶಸ್ತಿ-ಪುರಸ್ಕಾರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂತಸದಿಂದ ಹಂಚಿಕೊಂಡಿದ್ದಾರೆ. 2020ನೇ ಸಾಲಿನ ಕನ್ನಡ ಸಿನಿಮಾಗಳ ಪೈಕಿ ‘ಪಿಂಕಿ ಎಲ್ಲಿ?’ ಪ್ರಥಮ ಸ್ಥಾನಿಯಾದರೆ, ‘ದಾರಿ ಯಾವುದಯ್ಯ ವೈಕುಂಠಕ್ಕೆ’ ಹಾಗು ‘ಓ ನನ್ನ ಚೇತನ’ ದ್ವಿತೀಯ ಹಾಗು ತೃತೀಯ ಸ್ಥಾನಿಯಾಗಿದೆ. ತೀರ್ಪುಗಾರರಿಂದ ನೀಡಲ್ಪಡುವ ವಿಶೇಷ ಪ್ರಶಸ್ತಿಗೆ ‘ಮಸಣದ ಹೂವು’ ಚಿತ್ರ ಭಾಜನವಾಗಿದೆ.

2021ರಲ್ಲಿ ಬಂದಂತಹ ಸಿನಿಮಾಗಳಲ್ಲಿ ‘ದೊಡ್ಡ ಹಟ್ಟಿಯ ಬೋರೇಗೌಡ’ ಚಿತ್ರಕ್ಕೆ ಪ್ರಥಮ ಸ್ಥಾನ, ‘ದಂಡಿ’ ಗೆ ಎರಡನೇ ಸ್ಥಾನ ಹಾಗು ‘ದೇವದ ಕಾಡ್’ ಚಿತ್ರಕ್ಕೆ ಮೂರನೇ ಸ್ಥಾನದ ಪ್ರಶಸ್ತಿಗಳನ್ನು ನೀಡಲಾಗಿದೆ. ‘ಕೇಕ್’ ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನ ನೀಡಿ ಪುರಸ್ಕಾರಿಸಲಾಗಿದೆ.

ಇನ್ನು ಮನರಂಜನೆಯನ್ನ ದೃಷ್ಟಿಕೋನವನ್ನಾಗಿ ಇಟ್ಟುಕೊಂಡು ಕೂಡ ಪ್ರಶಸ್ತಿಗಳನ್ನ ನೀಡಲಾಗಿದೆ. 2020ರ ಸಾಲಿನ ಅತ್ಯುತ್ತಮ ಮನರಂಜನ ಸಿನಿಮಾ ವಿಭಾಗದಲ್ಲಿ ‘ದಿಯಾ’ಗೆ ಮೊದಲ ಪ್ರಶಸ್ತಿ, ‘ಶಿವಾಜಿ ಸುರತ್ಕಲ್’ಗೆ ಎರಡನೇ ಪ್ರಶಸ್ತಿ ಹಾಗು ‘ಲವ್ ಮೊಕ್ಟೇಲ್’ಗೆ ಮೂರನೇ ಪ್ರಶಸ್ತಿ ನೀಡಲಾಗಿದೆ. 2021ರಲ್ಲಿ ತೆರೆಕಂಡ ಸಿನಿಮಾಗಳಲ್ಲಿ ‘ಯುವರತ್ನ’, ‘ರಾಬರ್ಟ್’ ಹಾಗು ‘ಕೋಟಿಗೊಬ್ಬ 3’ ಸಿನಿಮಾಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗು ತೃತೀಯ ಪ್ರಶಸ್ತಿಗಳನ್ನ ನೀಡಲಾಗಿದೆ. ‘ಪೊಗರು’ ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಲಭಿಸಿದೆ.