• March 10, 2022

ಹಾಲಿವುಡ್ ಗೆ ಕಾಲಿಡಲಿದ್ದಾರೆ ಆಲಿಯಾ ಭಟ್

ಹಾಲಿವುಡ್ ಗೆ ಕಾಲಿಡಲಿದ್ದಾರೆ ಆಲಿಯಾ ಭಟ್

ಬಾಲಿವುಡ್ ನಲ್ಲಿ ಗಂಭೀರ ಛಾಪು ಮೂಡಿಸಿರೋ ಕೆಲವೇ ಕೆಲವು ನಟಿಮಣಿಯರಲ್ಲಿ ಮುಂಚೂಣಿಯಲ್ಲಿರುವವರ ಪೈಕಿ ಆಲಿಯಾ ಭಟ್ ಕೂಡ ಒಬ್ಬರು. ತಮ್ಮ ನಟನೆಯ ಮೂಲಕ ತಮ್ಮದೇ ಆದ ಒಂದು ಸ್ಥಾನವನ್ನ ಆಲಿಯಾ ಭಟ್ ಈಗಾಗಲೇ ಹಿಂದಿಯಲ್ಲಿ ಕಂಡುಕೊಂಡಿದ್ದಾರೆ. ರಾಜಾಮೌಳಿಯವರ RRR ಮೂಲಕ ತೆಲುಗು ಸಿನಿಮಾರಂಗಕ್ಕೂ ಕಾಲಿಟ್ಟಿರೋ ಆಲಿಯಾ ಭಟ್, ಟೋಲಿವುಡ್ ನ ಪ್ರೇಕ್ಷಕರ ಕಣ್ಣುಕುಕ್ಕಲು ಕಾಯುತ್ತಿದ್ದಾರೆ. ಇದಷ್ಟೇ ಅಲ್ಲದೇ ಆಲಿಯಾಗೆ ಇದೀಗ ಇಂಗ್ಲೀಷ್ ಸಿನಿಮಾವೊಂದರಿಂದ ಕೂಡ ಅವಕಾಶ ಬಂದಿದ್ದು ಇನ್ನೇನು ಕೆಲವೇ ಸಮಯದಲ್ಲಿ ಅವರ ಭಾಗದ ಚಿತ್ರೀಕರಣ ಆರಂಭವಾಗಲಿದೆಯಂತೆ.

‘ವಂಡರ್ ವಿಮೆನ್’ ಚಿತ್ರಗಳಿಂದ ಪ್ರಪಂಚಾದಾದ್ಯಂತ ಪ್ರಸಿದ್ಧಿ ಪಡೆದಿರೋ ಗಲ್ ಗಡೊಟ್ ಜೊತೆಗೆ ಆಲಿಯಾ ಬಣ್ಣ ಹಚ್ಚಲಿದ್ದಾರೆ. ನೆಟ್ ಫ್ಲಿಕ್ಸ್ ನಿರ್ಮಾಣ ಮಾಡಲಿರೋ ‘ಹಾರ್ಟ್ ಒಫ್ ಸ್ಟೋನ್’ ಅನ್ನುವಂತ ರೋಮಾಂಚಕ ಥ್ರಿಲರ್ ಕಥೆಯೊಂದಿಗೆ ಆಲಿಯಾ ಹಾಲಿವುಡ್ ಮೆಟ್ಟಿಲೇರಲಿದ್ದಾರೆ. ಹೆಸರಾಂತ ನಿರ್ದೇಶಕ ಟಾಮ್ ಹಾರ್ಪೆರ್ ನೇತೃತ್ವದಲ್ಲಿ ಮೂಡಿಬರಲಿರೋ ಈ ಚಿತ್ರದಲ್ಲಿ ಆಲಿಯಾ ಹಾಗು ಗಲ್ ಗಡೊಟ್ ಜೊತೆಗೆ ‘ಫಿಫ್ಟಿ ಶೇಡ್ಸ್ ಒಫ್ ಗ್ರೇ’ ಖ್ಯಾತಿಯ ಜಾಮೀ ಡೋರ್ನನ್ ಕೂಡ ತೆರೆಮೇಲೆ ಕಾಣಲಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರವನ್ನ ಸಂತಸಭರಿತ ಅಚ್ಚರಿಯ ಮಾದರಿಯಲ್ಲಿ ನೆಟ್ ಫ್ಲಿಕ್ಸ್ ಹಂಚಿಕೊಂಡಿದೆ. ಆಲಿಯಾ ನಟನೆಯ ‘ಗಲ್ಲಿ ಬಾಯ್'(2019), ‘ಹೈವೇ'(2014) ಚಿತ್ರಗಳು ಬರ್ಲಿನೆಲ್ ನಲ್ಲಿ ತಮ್ಮ ಪ್ರೀಮಿಯರ್ ಶೋ ಪಡೆದಿದ್ದವು. ಇತ್ತೀಚಿಗಷ್ಟೇ ತೆರೆಕಂಡು ಸದ್ಯ ಚಿತ್ರಮಂದಿರಗಳನ್ನಾಳುತ್ತಿರುವ ‘ಗಂಗೂಭಾಯ್ ಕಥಿಯಾವಾಡಿ’ ಸಿನಿಮಾ ಕೂಡ ಬೆರ್ಲಿನ್ ನ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತನ್ನ ಪ್ರೀಮಿಯರ್ ಶೋವನ್ನು ಬಿಡುಗಡೆಗೊಳಿಸಿತ್ತು. ಅಲ್ಲದೇ “ಗಲ್ಲಿ ಬಾಯ್” ಚಿತ್ರವನ್ನು ಭಾರತದಿಂದ ಆಸ್ಕರ್ ಪ್ರಶಸ್ತಿಗೆ ಕೂಡ ಕಳಿಸಲಾಗಿತ್ತು. ಪ್ರಸ್ತುತ ಆಲಿಯಾ ಭಟ್ ಅನ್ನು ಈ ಹೊಸ ಚಿತ್ರದಲ್ಲಿ ಸೇರಿಸಿಕೊಂಡಿರುವುದು ಭಾರತೀಯ ಸಿನಿರಸಿಕರಲ್ಲಿ ಒಂದಿಷ್ಟು ಹೆಮ್ಮೆಯನ್ನಂತು ತಂದಿದೆ.