• June 19, 2022

ಥೈಲ್ಯಾಂಡ್ ನಲ್ಲಿ ಸದ್ದು ಮಾಡುತ್ತಿರುವ ಆಲಿಯಾ ನಟನೆಯ ಸಿನಿಮಾ

ಥೈಲ್ಯಾಂಡ್ ನಲ್ಲಿ ಸದ್ದು ಮಾಡುತ್ತಿರುವ ಆಲಿಯಾ ನಟನೆಯ ಸಿನಿಮಾ

ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾ ಸೂಪರ್ ಹಿಟ್ ಸಿನಿಮಾಗಳಿಗೆ ಸೇರಿರುವುದು ಸಿನಿ ಪ್ರಿಯರಿಗೆ ತಿಳಿದೇ ಇದೆ. ಅದಕ್ಕೆ ಅದು ಬಾಕ್ಸ್ ಆಫೀಸ್ ನಲ್ಲಿ ಗೆದ್ದಿರುವುದೇ ಸಾಕ್ಷಿ. ಇಂತಿಪ್ಪ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾ ಬಿಡುಗಡೆಯಾಗಿ ತಿಂಗಳು ಕಳೆದ ನಂತರ ಮಗದೊಂದು ಸಂತಸದ ವಿಚಾರ ಹೊರಬಂದಿದೆ‌. ಅದೇನಂತೀರಾ? ಗಂಗೂಬಾಯಿ ಸಿನಿಮಾವನ್ನು ಥೈಲ್ಯಾಂಡ್ ಜನರು ಕೂಡಾ ಮೆಚ್ಚಿಕೊಂಡಿದ್ದಾರೆ.

ಸೆಕ್ಸ್ ವರ್ಕರ್ ಗಂಗೂಬಾಯಿ ಜೀವನ ಚರಿತ್ರೆಯನ್ನು ಒಳಗೊಂಡಿರುವ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಇದೀಗ ಥೈಲ್ಯಾಂಡ್‌ ನಲ್ಲೂ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣವೂ ಇದೆ. ಮೊದಲೆಲ್ಲಾ ಥೈಲ್ಯಾಂಡ್‌ನಲ್ಲಿ ಬಾಲಿವುಡ್‌ ಸಿನಿಮಾಗಳನ್ನು ನೋಡುವುದಕ್ಕೆ ಸರಿಯಾದ ಅವಕಾಶಗಳು ಇರಲಿಲ್ಲ. ಇದೀಗ ಒಟಿಟಿ ವ್ಯವಸ್ಥೆ ಬಂದಿರುವ ಕಾರಣ ಇದು ಸಾಧ್ಯವಾಗಿದೆ.

ಹೌದು, ಥೈಲ್ಯಾಂಡ್‌ ನ ಒಟಿಟಿ ಯೊಂದು ಇಂತಹ ಸುವರ್ಣಾವಕಾಶವನ್ನು ಮಾಡಿಕೊಟ್ಟಿದ್ದು ಅಲ್ಲಿನ ಸಿನಿಪ್ರಿಯರಿಗೆ ಇದು ವರದಾನವೇ ಆಗಿದೆ‌. ಕೊರೊನಾ ನಂತರ ಭಾರತೀಯ ಭಾಷೆಯ ಹೆಚ್ಚಿನ ಸಿನಿಮಾಗಳನ್ನು ನೋಡುವ ಅವಕಾಶ ಥೈಲ್ಯಾಂಡ್ ಜನರಿಗೆ ಸಿಗುತ್ತಿದೆ.

ಅಂದ ಹಾಗೇ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾ ಥೈ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗುತ್ತಿದ್ದು ದೊಡ್ಡ ಮಟ್ಟದ ಯಶಸ್ಸು ಗಳಿಸಿದೆ ಮಾತ್ರವಲ್ಲ ಗಳಿಸುತ್ತಲೂ ಇದೆ. ಆಲಿಯಾ ಭಟ್ ಅವರ ಸ್ಟೈಲ್ ಗೆ, ನಟನೆಗೆ ಥೈಲ್ಯಾಂಡ್ ಜನ ಫಿದಾ ಆಗಿದ್ದಾರೆ‌.

ಮಾತ್ರವಲ್ಲ ಥೈಲ್ಯಾಂಡ್ ನ ಸಾಮಾಜಿಕ ಜಾಲತಾಣದಲ್ಲೂ ಕೂಡಾ ಈಕೆಯದ್ದೇ ಹವಾ. ಥೈಲ್ಯಾಂಡ್ ಜನರ ಪ್ರೀತಿಗೆ ಮನಸೋತಿರುವ ಆಲಿಯಾ ಭಟ್ ಧನ್ಯವಾದ ಹೇಳಿದ್ದಾರೆ. ಜೊತೆಗೆ ನಿಮ್ಮನ್ನು ನೋಡಲು ಬರುತ್ತೇನೆ ಎಂದು ಕೂಡಾ ಹೇಳಿದ್ದಾರೆ. ಆದಷ್ಟು ಬೇಗ ಆಲಿಯಾ ಅವರು ಥೈಲ್ಯಾಂಡ್ ಗೆ ಹೋಗಲಿದ್ದಾರೆ ಎಂಬ ಮಾತುಗಳು ಕೂಡಾ ಕೇಳಿ ಬರುತ್ತಿದೆ.