• July 10, 2022

ಮತ್ತೆ ತಮಿಳಿಗೆ ಬಂದ ಐಶ್ವರ್ಯಾ ರೈ

ಮತ್ತೆ ತಮಿಳಿಗೆ ಬಂದ ಐಶ್ವರ್ಯಾ ರೈ

ನಿರ್ದೇಶಕ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಚಿತ್ರದ ಮೂಲಕ ಐಶ್ವರ್ಯಾ ರೈ ಬಚ್ಚನ್ ಮತ್ತೆ ತಮಿಳು ಸಿನಿಮಾಗೆ ಮರಳಲಿದ್ದಾರೆ. ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಐಶ್ವರ್ಯಾ ರೈ ಪಜುವೂರಿನ ರಾಜಮನೆತನದ ರಾಜಕುಮಾರಿ ನಂದಿನಿಯ ಪಾತ್ರವನ್ನು ಮಾಡಲಿದ್ದಾರೆ.
ಜುಲೈ 6ರಂದು ಚಿತ್ರ ತಂಡ ಐಶ್ವರ್ಯಾ ಅವರ ಫಸ್ಟ್‌ಲುಕ್ ಅನ್ನು ರಿಲೀಸ್ ಮಾಡಿದ್ದಾರೆ. ರಾಣಿಯಂತೆ ಮಿಂಚುತ್ತಿರುವ ಐಶ್ವರ್ಯಾ ಅಭಿನಯದ ಪೊನ್ನಿಯಿನ್ ಸೆಲ್ವನ್ ಭಾಗ 1 ಸೆಪ್ಟೆಂಬರ್ 30 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಈ ಸಿನಿಮಾದಲ್ಲಿ ದೇವದಾಸ್ ನಟಿ ಐಶ್ವರ್ಯಾ ದ್ವಿಪಾತ್ರವನ್ನು ನಿರ್ವಹಿಸಲಿದ್ದಾರೆ. ಪಜುವೂರಿನ ರಾಜಕುಮಾರಿ ನಂದಿನಿ ಹಾಗೂ ಮಂದಾಕಿನಿ ದೇವಿಯಾಗಿ ಐಶ್ವರ್ಯಾ ಅಭಿಮಾನಿಗಳನ್ನು ರಂಜಿಸಲಿದ್ದಾರೆ.
ಈ ಸಿನಿಮಾದಲ್ಲಿ ನಟಿಸುತ್ತಿರುವ ಚಿಯಾನ್ ವಿಕ್ರಮ್ ಮತ್ತು ಕಾರ್ತಿ ಅವರ ಫಸ್ಟ್ ಲುಕ್ ಪೋಸ್ಟರ್‌ಗಳು ಈಗಾಗಲೇ ಪ್ರತೀ ಚಿತ್ರ ರಸಿಕರ ಗಮನ ಸೆಳೆದಿವೆ. ಪೊನ್ನಿಯಿನ್ ಸೆಲ್ವನ್‌ನ ನಲ್ಲಿ ಆದಿತ್ಯ ಕರಿಕಾಳನ್ ಮತ್ತು ವಂತಿಯತೇವನ್ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ತಮಿಳು, ಹಿಂದಿ, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಯಲ್ಲಿ ಈ ಸಿನೆಮಾ ಬಿಡುಗಡೆಯಾಗಲಿದೆ.

ಲೈಕಾ ಪ್ರೊಡಕ್ಷನ್ಸ್ ಮೂಲಕ ತೆರೆಗೆ ಬರುತ್ತಿರುವ ಸಿನೆಮಾ ಇದಾಗಿದ್ದು ಪೋಸ್ಟರ್ ಹಂಚಿಕೊಂಡ ಲೈಕಾ ಪ್ರೊಡಕ್ಷನ್ಸ್ – ”ಸೇಡಿಗೆ ಸುಂದರವಾದ ಮುಖವಿದೆ! ಪಜುವೂರಿನ ರಾಣಿ ನಂದಿನಿಯನ್ನು ಭೇಟಿ ಮಾಡಿ! #PS1 ಸೆಪ್ಟೆಂಬರ್ 30 ರಂದು ತಮಿಳು, ಹಿಂದಿ, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ” ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದೆ.

ಸಿನಿಮಾದಲ್ಲಿ ನಂದಿನಿ ಪಾತ್ರಧಾರಿಯಾಗಿರುವ ಐಶ್ವರ್ಯಾ ಅವರು ಶರತ್‌ಕುಮಾರ್ ನಿರ್ವಹಿಸುತ್ತಿರುವ ಪೆರಿಯ ಪಜುವೆಟ್ಟರಾಯರ್ ಪಾತ್ರಕ್ಕೆ ಪತ್ನಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚೋಳ ಸಾಮ್ರಾಜ್ಯದ ಅವನತಿಗೆ ಸಂಚು ರೂಪಿಸುವ ನಂದಿನಿ ಹಾಗೂ ನಂದಿನಿಯ ತಾಯಿ ಮಂದಾಕಿನಿ ದೇವಿಯಾಗಿಯೂ ಐಶ್ವರ್ಯ ಐಶ್ವರ್ಯಾ ಕಾಣಿಸಿಕೊಳ್ಳಲಿದ್ದಾರೆ.

ಅಂದ ಹಾಗೆ ಈ ಸಿನಿಮಾ ನಿರ್ದೇಶಕ ಮಣಿರತ್ನಂ ಅವರ ಒಂದು ದಶಕದ ಕನಸಿನ ಕೂಸು. ಹಲವಾರು ಅಡೆತಡೆಗಳಿಂದ ನಿರ್ಮಿಸಲು ಸಾಧ್ಯವಾಗದಿದ್ದ ಈ ಸಿನಿಮಾಕ್ಕೆ ಈಗ ಕಾಲ ಕೂಡಿ ಬಂದಿದ್ದು, ಮಣಿರತ್ನಂ ಪೊನ್ನಿಯಿನ್ ಸೆಲ್ವನ್ ಸಿನಿಮಾ ಮೂಲಕ ತಮ್ಮ ಕನಸನ್ನು ನನಸು ಮಾಡ ಹೊರಟಿದ್ದಾರೆ.

ಚಿಯಾನ್ ವಿಕ್ರಮ್, ತ್ರಿಶಾ, ಕಾರ್ತಿ, ಐಶ್ವರ್ಯ ರೈ ಬಚ್ಚನ್, ಜಯಂ ರವಿ, ಪ್ರಕಾಶ್ ರಾಜ್, ಶರತ್‌ಕುಮಾರ್, ಐಶ್ವರ್ಯ ಲಕ್ಷ್ಮಿ ಮತ್ತು ಶೋಭಿತಾ ಧೂಳೀಪಲ ಸೇರಿದಂತೆ ಬಹುದೊಡ್ಡ ತಾರಾಗಣ ಈ ಸಿನಿಮಾದಲ್ಲಿದೆ. ಕಲ್ಕಿ ಕೃಷ್ಣಮೂರ್ತಿಯವರು ಬರೆದ ಪೊನ್ನಿಯಿನ್ ಸೆಲ್ವನ್
ತಮಿಳು ಸಾಹಿತ್ಯಾಧಾರಿತ ಕಾದಂಬರಿಯನ್ನು ಆಧರಿಸಿರುವ ಈ ಚಲನಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ರಾಗ ಸಂಯೋಜನೆ ಮಾಡಿದ್ದಾರೆ.