• March 23, 2022

ರಿಯಾಲಿಟಿ ಶೋವಿಗೂ ಸೀರಿಯಲ್ ಗೂ ವ್ಯತ್ಯಾಸವಿದೆ – ಇಶಿತ ವರ್ಷ

ರಿಯಾಲಿಟಿ ಶೋವಿಗೂ ಸೀರಿಯಲ್ ಗೂ ವ್ಯತ್ಯಾಸವಿದೆ – ಇಶಿತ ವರ್ಷ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿ ಯಲ್ಲಿ ಮಾಯಾಳಾಗಿ ನಟಿಸಿದ್ದ ಇಶಿತ ವರ್ಷ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಆದರೆ ಈ ಬಾರಿ ಸಣ್ಣ ಬದಲಾವಣೆಯಿದೆ. ಇಶಿತ ಅವರು ಕಿರುತೆರೆಗೆ ಮರಳಿರುವುದೇನೋ ನಿಜ. ಆದರೆ ಈ ಬಾರಿ ಅವರು ನಟಿಯಾಗಿ ಮರಳಿಲ್ಲ. ಬದಲಿಗೆ ಸ್ಪರ್ಧಿಯಾಗಿ ಕಂ ಬ್ಯಾಕ್ ಆಗಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ಸ್ ರಿಯಾಲಿಟಿ ಶೋವಿನ ಸ್ಪರ್ಧಿಯಾಗಿ ಕಾಣಿಸಿಕೊಂಡಿರುವ ಇಶಿತ ವರ್ಷ “ಇದೊಂದು ಅದ್ಭುತವಾದ ಜರ್ನಿ” ಎಂದು ಹೇಳಿದ್ದಾರೆ.

“ಇದೇ ಮೊದಲ ಬಾರಿಗೆ ನೃತ್ಯಕ್ಕೆ ಸಂಬಂಧಪಟ್ಟ ಶೋ ವಿನಲ್ಲಿ ಕಾಣಿಸಿಕೊಂಡಿದ್ದೇನೆ. ಖುಷಿಯಾಗುತ್ತಿದೆ. ನಿಜವಾಗಿ ಹೇಳಬೇಕೆಂದರೆ ಇದು ನನಗೂ ಒಂದು ರೀತಿಯ ಚಾಲೆಂಜ್ ಹೌದು. ಡ್ಯಾನ್ಸ್ ಶೋ ಎಂದ ಮಾತ್ರಕ್ಕೆ ಅದೆಂಥ ಸುಲಭವಲ್ಲ. ಅದ‌ನ್ನು ಇಷ್ಟಪಟ್ಟು ಹಾಗೂ ಕಷ್ಟಪಟ್ಟು ಮಾಡಬೇಕು” ಎನ್ನುತ್ತಾರೆ.

“ರಿಯಾಲಿಟಿ ಶೋ ವಿನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಾಗ ಬೇಕಾ ಬೇಡ್ವಾ ಎಂದು ಕನ್ ಫ್ಯೂಶನ್ ಆಗಿತ್ತು. ಆದರೆ ಚಾಲೆಂಜಿಗ್ ಆದುದರಿಂದ ಒಪ್ಪಿಕೊಂಡೆ. ಖುಷಿಯಾಗುತ್ತಿದೆ” ಎನ್ನುವ ಇಶಿತ ವರ್ಷ “ರಿಯಾಲಿಟಿ ಶೋವಿಗೂ, ಸೀರಿಯಲ್ ಗೂ ತುಂಬಾ ವ್ಯತ್ಯಾಸವಿದೆ” ಎನ್ನುತ್ತಾರೆ.

“ಧಾರಾವಾಹಿಯಲ್ಲಾದರೆ ಎಷ್ಟು ಬೇಕಾದರೂ ಟೇಕ್ಸ್ ತೆಗೆದುಕೊಳ್ಳಬಹುದು. ಆದರೆ ಶೋ ವಿನಲ್ಲಿ ಹಾಗಲ್ಲ. ಕೇವಲ ಒಂದೇ ಟೇಕ್. ಇನ್ನು ಈ ಶೋಗಾಗಿ ನಾವು ವಾರದಲ್ಲಿ 2 ರಿಂದ 3 ದಿನ ಪ್ರಾಕ್ಟೀಸ್ ಮಾಡಬೇಕಾಗುತ್ತದೆ. ಮುಖ್ಯವಾಗಿ ಕೊನೆ ಹಂತದಲ್ಲಿ ಏನಾದರೂ ಬದಲಾವಣೆಯಾದರೆ ಅದನ್ನು ಸ್ವೀಕರಿಸಲು ತಯಾರಿರಬೇಕು. ಸರಳವಾಗಿ ಹೇಳಬೇಕೆಂದರೆ ಮೆಂಟಲಿ ಪ್ರೀಪೇರ್ ಆಗಿರಬೇಕು ಅಷ್ಟೇ” ಎಂದು ನಗುನಗುತ್ತಾ ಹೇಳುವ ಇಶಿತ ವರ್ಷ ಡ್ಯಾನ್ಸಿಂಗ್ ಶೋವಿನ ಭಾಗವಾಗಿರುವುದಕ್ಕೆ ಖುಷಿಯಿಂದಿದ್ದಾರೆ.

ಇನ್ನು ಇಶಿತ ಅವರಿಗೆ ರಿಯಾಲಿಟಿ ಶೋ ಹೊಸದೇನಲ್ಲ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕುಕ್ಕು ವಿಥ್ ಕಿರಿಕ್ ರಿಯಾಲಿಟಿ ಶೋವಿನಲ್ಲಿ ಕಾಣಿಸಿಕೊಂಡಿರುವ ಇಶಿತ ವರ್ಷ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಜ ರಾಣಿ ಶೋವಿನಲ್ಲಿ ಪತಿ ಕೊರಿಯೋಗ್ರಾಫರ್ ಮುರುಗಾನಂದ ಜೊತೆಗೆ ಕಾಣಿಸಿಕೊಂಡಿದ್ದರು. ಮಾತ್ರವಲ್ಲ ಅವರು ಆ ಶೋವಿನ ರನ್ನರ್ ಅಪ್ ಕೂಡಾ ಆಗಿ ಹೊರಹೊಮ್ಮಿದ್ದರು.