- May 1, 2022
ಗ್ಯಾಂಗ್ ಸ್ಟರ್ ಆಗಿ ಬರಲಿದ್ದಾರೆ ಆದಿತ್ಯ


ತುಂಬಾ ದಿನಗಳ ನಂತರ ನಟ ಆದಿತ್ಯ ವೀರ ಕಂಬಳ ಚಿತ್ರದಲ್ಲಿ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಆದಿತ್ಯ ಅವರ ತಂದೆ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ತುಳುನಾಡಿನ ಖ್ಯಾತ ಕಂಬಳದ ಕುರಿತು ಆಗಿದೆ.
ಮಂಗಳೂರಿನಲ್ಲಿ ಶೂಟಿಂಗ್ ಮಾಡುತ್ತಿರುವ ಆದಿತ್ಯ ಪಾತ್ರದ ಬಗ್ಗೆ ಹೇಳಿದ್ದಾರೆ.


“ನಾನು ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಸೆಕೆಂಡ್ ಹಾಫ್ ನಲ್ಲಿ ಈ ಪಾತ್ರಕ್ಕೆ ಮಹತ್ವ ದೊರೆಯಲಿದೆ. ಕಂಬಳ ತುಳುನಾಡಿನ ಪ್ರಮುಖ ಭಾಗವಾಗಿದೆ ಎಂದು ನಂಬಿರುವ ಕಂಬಳಕ್ಕೆ ಪ್ರೋತ್ಸಾಹ ನೀಡುವ ಪಾತ್ರದಲ್ಲಿ ನಟಿಸುತ್ತಿದ್ದೇನೆ. ನಾನಿಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ನನ್ನ ಪಾತ್ರ ಹಲವು ಭಾವನೆಗಳನ್ನು ಹೊಂದಿದೆ. ನನ್ನ ಲುಕ್ ನ್ನು ಮೇ ತಿಂಗಳ ಮೊದಲ ವಾರದಲ್ಲಿ ನಿರ್ದೇಶಕರು ಬಹಿರಂಗ ಪಡಿಸಲಿದ್ದಾರೆ.” ಎಂದಿದ್ದಾರೆ.


ಮಂಗಳೂರಿನಲ್ಲಿ ಶೂಟಿಂಗ್ ನಡೆಯುತ್ತಿರುವುದಕ್ಕೆ ಉತ್ಸುಕರಾಗಿರುವ ಆದಿತ್ಯ “ಜನರು ನಮಗೆ ತುಂಬಾ ಪ್ರೀತಿ ತೋರುತ್ತಿದ್ದಾರೆ. ಅವರ ಹೃದಯಕ್ಕೆ ಹತ್ತಿರವಾದ ವಿಚಾರವನ್ನು ನಾವು ಮುಟ್ಟಿದ್ದೇವೆ ಎಂದು ಅವರಿಗೆ ತಿಳಿದಿದೆ” ಎಂದಿದ್ದಾರೆ. ತಂದೆಯ ನಿರ್ದೇಶನದಲ್ಲಿ ನಟಿಸುತ್ತಿರುವ ಆದಿತ್ಯ “ನಾವಿಬ್ಬರೂ ಸಂಪೂರ್ಣ ವೃತ್ತಿಪರರು. ಅವರು ಈ ನೌಕೆಯ ಕ್ಯಾಪ್ಟನ್. ನಟನಾಗಿ ನಾನು ಅವರು ಹೇಗೆ ನಿರೀಕ್ಷೆ ಮಾಡುತ್ತಾರೋ ಹಾಗೆ ಮಾಡುತ್ತೇನೆ” ಎಂದಿದ್ದಾರೆ.


ಸದ್ಯ ಪಾತ್ರಗಳ ವಿಚಾರದಲ್ಲಿ ಚೂಸಿಯಾಗಿರುವ ಆದಿತ್ಯ “ಕೆಜಿಎಫ್ ನಂತಹ ಸಿನಿಮಾಗಳಿಂದ ಕನ್ನಡ ಸಿನಿಮಾ ಬಗ್ಗೆ ಪ್ಯಾರಾಮೀಟರ್ ಸೆಟ್ ಆಗಿದೆ. ಹೀಗಾಗಿ ಪಾತ್ರಗಳ ವಿಷಯದಲ್ಲಿ ಜಾಗರೂಕತೆ ವಹಿಸಬೇಕು.ನಾನು ಹೊಸ ನಿರ್ದೇಶಕರ ಬಳಿ ಹಲವು ಪ್ರಾಜೆಕ್ಟ್ ಗಳ ಬಗ್ಗೆ ಚರ್ಚಿಸುತ್ತಿದ್ದೇನೆ. ಹಿಂದಿ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದೇನೆ” ಎಂದಿದ್ದಾರೆ.




