- April 5, 2022
ಕೆಜಿಎಫ್ ಬಗ್ಗೆ ಅಧೀರನ ಮನದಾಳದ ಮಾತು


ಬಾಲಿವುಡ್ ನ ಮುನ್ನಾಭಾಯಿ ಸಂಜಯ್ ದತ್ ಕೆಜಿಎಫ್ -2 ಚಿತ್ರದ ಮೂಲಕ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಖಳನಾಯಕನಾಗಿ ಗಮನ ಸೆಳೆದಿರುವ ಸಂಜಯ್ ಭರ್ಜರಿ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಶೂಟಿಂಗ್ ವೇಳೆ ದತ್ ಎಷ್ಟು ಕಷ್ಟಪಟ್ಟರು ಎಂದು ಹೇಳಿಕೊಂಡಿದ್ದಾರೆ.


ಕೆಜಿಎಫ್ – 2 ಚಿತ್ರದಲ್ಲಿ ವಿಭಿನ್ನ ಗೆಟಪ್ ನಿಂದ ಮಿಂಚುತ್ತಿರುವ ಸಂಜಯ್ ದತ್ ಅವರನ್ನು ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸಂಜಯ್ ಅವರು ಶೂಟಿಂಗ್ ನಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದರು.


ಸಿನಿಮಾದಲ್ಲಿ ಸಂಜಯ್ ದತ್ ಅವರು ಧರಿಸಿದ್ದ ಕಾಸ್ಟ್ಯೂಮ್ 20 ಕೆಜಿ ತೂಕ ಇತ್ತು. ಅದನ್ನು ಹಾಕಿಕೊಂಡು ಶೂಟ್ ಮಾಡುವುದು ತುಂಬಾ ಕಷ್ಟವಾಗಿತ್ತು. ಇದರ ಬಗ್ಗೆ ಮಾತನಾಡಿದ್ದ ಸಂಜಯ್ ದತ್ “ಸಿನಿಮಾದಲ್ಲಿ ನಾನು ಉಪಯೋಗ ಮಾಡಿರುವಂತಹ ಆಯುಧ ಲೆದರ್ ನಿಂದ ತಯಾರಿಸಿದ್ದಾಗಿತ್ತು. ಇದರಿಂದ ನನಗೆ ನಟಿಸುವುದು ಕೊಂಚ ಕಷ್ಟವೂ ಆಗಿತ್ತು. ನಾನು ಮಾತ್ರವಲ್ಲದೇ ಇಡೀ ತಂಡವೂ ಇದರಿಂದ ಕೊಂಚ ಸಂಕಷ್ಟಕ್ಕೆ ಒಳಗಾಗಬೇಕಾಯಿತು. ಇನ್ನು ಸಿನಿಮಾದ ಕ್ಲೈಮಾಕ್ಸ್ ನ ಚಿತ್ರೀಕರಣದ ಸಮಯದಲ್ಲಿ ನಾನು ಹೆಚ್ಚಿನ ತೂಕದ ಕಾಸ್ಟ್ಯೂಮ್ ಧರಿಸಿದ್ದೆ” ಎಂದಿದ್ದಾರೆ.


ಇದರ ಜೊತೆಗೆ “ಇನ್ನು ನಾನು ಮಾತ್ರ ತೂಕದ ಕಾಸ್ಟ್ಯೂಮ್ ಹಾಕಿರಲಿಲ್ಲ. ನನ್ನ ಹೊರತಾಗಿ ಯಶ್ ಅವರು ಕೂಡಾ ಅಷ್ಟೇ ತೂಕದ ಕಾಸ್ಟ್ಯೂಮ್ ಹಾಕಿಕೊಂಡಿದ್ದರು. ಈ ಸಿನಿಮಾದಲ್ಲಿ ನಾವು ಧೂಳಿನಲ್ಲಿ ಕೆಲಸ ಮಾಡಬೇಕಾಗಿತ್ತು. ಆರಂಭದಲ್ಲಿ ಕಷ್ಟ ಎನಿಸಿದರೂ ಪ್ರೀತಿ ಹಾಗೂ ಖುಷಿಯಿಂದ ಮಾಡಿದ್ದೇವೆ” ಎಂದಿದ್ದಾರೆ.


ನಟನೆ ಬಗೆಗಿನ ಪ್ರೀತಿ ಕುರಿತು ಹೇಳಿರುವ ಸಂಜಯ್ ದತ್ “ಕಲಾವಿದನಾಗಿರುವ ನಾನು ಕಲಾವಿದ ಆಗಿಯೇ ಸಾಯಲು ಬಯಸುತ್ತೇನೆ. ಯಾವುದೇ ರೀತಿಯ ಪಾತ್ರ ಸಿಗಲಿ ನಾನು ಅದಕ್ಕೆ ಜೀವ ತುಂಬಲು ತಯಾರಿದ್ದೇನೆ. ನಾನು ಬಣ್ಣದ ಜಗತ್ತಿಗೆ ಬಂದು 45 ವರ್ಷಗಳಾಯಿತು. ನನ್ನ ಸಿನಿ ಕೆರಿಯರ್ ನಲ್ಲಿ ಇದು ತುಂಬಾ ಭಿನ್ನವಾದ ಪಾತ್ರ” ಎಂದು ಹೇಳಿದ್ದಾರೆ ಸಂಜಯ್ ದತ್.


