• April 27, 2022

‘ಬಾನದಾರಿಯಲ್ಲಿ’ನ ಪಯಣ ಸೇರಿದ ನಟಿಮಣಿಯರು.

‘ಬಾನದಾರಿಯಲ್ಲಿ’ನ ಪಯಣ ಸೇರಿದ ನಟಿಮಣಿಯರು.

ಗೋಲ್ಡನ್ ಸ್ಟಾರ್ ಗಣೇಶ್ ಹಾಗು ಅವರ ಆಪ್ತ ಸ್ನೇಹಿತ ಪ್ರೀತಮ್ ಗುಬ್ಬಿಯವರು ಹೊಸದೊಂದು ಚಿತ್ರಕ್ಕೆ ಒಂದಾಗುತ್ತಿದ್ದಾರೆ ಎಂಬುದು ಸದ್ಯ ಸ್ಯಾಂಡಲ್ವುಡ್ ನ ತಾಜ ಸುದ್ದಿ. ಈಗಾಗಲೇ ‘ಮಳೆಯಲಿ ಜೊತೆಯಲಿ’, ’99’ ಹಾಗು ‘ದಿಲ್ ರಂಗೀಲಾ’ ಚಿತ್ರಗಳಲ್ಲಿ ನಾಯಕ-ನಿರ್ದೇಶಕ ಜೋಡಿಯಾಗಿ ಕಾಣಿಸಿಕೊಂಡಿರುವ ಈ ಇಬ್ಬರು ಇದೀಗ ನಾಲ್ಕನೇ ಬಾರಿಗೆ ಒಂದಾಗುತ್ತಿದ್ದಾರೆ. ಅಪ್ಪು ಅವರು ಹಾಡಿದಂತ ಪ್ರಸಿದ್ಧ ಹಾಡನ್ನ ಗೌರವದಿಂದ ನೆನೆಯುತ್ತ ‘ಬಾನದಾರಿಯಲ್ಲಿ’ ಎಂದೇ ಚಿತ್ರಕ್ಕೆ ನಾಮಕರಣ ಮಾಡಿದ್ದಾರೆ.

ಈ ಸಿನಿಮಾದಲ್ಲಿ ನಟಿಸಲಿರುವ ಇಬ್ಬರು ನಟಿಯರನ್ನು ಪರಿಚಯಿಸಿದೆ ಚಿತ್ರತಂಡ. ‘ಬೀರಬಲ್’ ಚಿತ್ರದಿಂದ ಸಿನಿಮಾರಂಗಕ್ಕೆ ಕಾಲಿಟ್ಟಂತ ರುಕ್ಮಿಣಿ ವಸಂತ್ ಮೊದಲ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ‘ಬೀರಬಲ್: ಫೈಂಡಿಂಗ್ ವಜ್ರಮುನಿ’ ಚಿತ್ರದಿಂದ ನಾಯಕಿಯಾಗಿ ಕಾಣಿಸಿಕೊಂಡ ರುಕ್ಮಿಣಿ ವಸಂತ್, ಸದ್ಯ ಹೇಮಂತ್ ಕುಮಾರ್ ಅವರ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿಯವರಿಗೆ ನಾಯಕಿಯಾಗಿ, ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಾದಮೇಲೆ ‘ಬಾನದಾರಿಯಲ್ಲಿ’ ಚಿತ್ರದ ‘ಲೀಲಾ’ ಆಗಿ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಎರಡನೇ ನಾಯಕಿಯಾಗಿ ಇತ್ತೀಚಿಗಷ್ಟೇ ಬಿಡುಗಡೆಗೊಂಡ ‘ಏಕ್ ಲವ್ ಯ’ ಚಿತ್ರದ ನಾಯಕಿ, ರೀಷ್ಮ ನಾನಂಯ್ಯ ಅವರು ಬಣ್ಣ ಹಚ್ಚಲಿದ್ದಾರೆ. ಪ್ರೇಮ್ ಅವರ ನಿರ್ದೇಶನದಲ್ಲಿ ರಾಣ ಅವರಿಗೆ ನಾಯಕಿಯಾಗಿ ಬೆಳ್ಳಿತೆರೆಗೆ ಕಾಲಿಟ್ಟ ಇವರು ಈ ಚಿತ್ರದಲ್ಲಿ ‘ಕಾದಂಬರಿ’ಯಾಗಿ ಮನಸೆಳೆಯಲು ಸಿದ್ದರಾಗಿದ್ದಾರೆ.

ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗೋ ಸಾಧ್ಯತೆಗಳಿದ್ದು, ಚಿತ್ರತಂಡ ತನ್ನ ತಾರಾಗಣದ ಪರಿಚಯವನ್ನ ಪ್ರೇಕ್ಷಕರಿಗೆ ನೀಡುತ್ತಿದೆ. ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರದ ನಾಯಕ ನಟರಾಗಿರಲಿದ್ದಾರೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಚಿತ್ರದಲ್ಲಿ ಇಬ್ಬರು ನಾಯಕಿಯರಿರಲಿದ್ದಾರೆ. ಪ್ರೀತಮ್ ಗುಬ್ಬಿ ನಿರ್ದೇಶನದ ಈ ಚಿತ್ರ ‘ಶ್ರೀ ವಾರಿ ಟಾಕೀಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿದೆ. ವಿ ಹರಿಕೃಷ್ಣ ಅವರ ಸಂಗೀತ ಚಿತ್ರದಲ್ಲಿರಲಿದ್ದು, ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.