• January 23, 2022

ತಮಿಳು ಕಿರುತೆರೆಗೆ ಕಾಲಿಟ್ಟ ಈಕೆ “ಯಾರಿವಳು”?

ತಮಿಳು ಕಿರುತೆರೆಗೆ ಕಾಲಿಟ್ಟ ಈಕೆ “ಯಾರಿವಳು”?

ಉದಯ ವಾಹಿ‌ನಿಯಲ್ಲಿ ಪ್ರಸಾರವಾಗುತ್ತಿರುವ ಯಾರಿವಳು ಧಾರಾವಾಹಿಯಲ್ಲಿ ನಾಯಕಿ ಮಾಯಾ ಆಗಿ ಅಭಿನಯಿಸುತ್ತಿರುವ ಸ್ವಾತಿ ಕೊಂಡೆ ಹಿರಿತೆರೆಯ ಮೂಲಕ ನಟನಾ ಪಯಣ ಶುರು ಮಾಡಿದ ಚೆಲುವೆ. ನೀನಾಸಂ ಸತೀಶ್ ಅಭಿನಯದ ಬ್ಯೂಟಿಫುಲ್ ಮನಸ್ಸುಗಳು ಸಿನಿಮಾದಲ್ಲಿ ಅಚ್ಯುತ್ ಕುಮಾರ್ ಮಗಳಾಗಿ ನಟಿಸುವ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ ಸ್ವಾತಿ ಕೊಂಡೆ ಯಾರಿವಳು ಧಾರಾವಾಹಿಯ ಮೂಲಕ ಕಿರುತೆರೆಗೆ ಹಾರಿದರು.

ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆದಿರುವ ಸ್ವಾತಿ ಕೊಂಡೆ ಇದೀಗ ಸಿಹಿ ಸುದ್ದಿ ನೀಡಿದ್ದಾರೆ. ಇಷ್ಟು ದಿನಗಳ ಕಾಲ ಕನ್ನಡ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದ ಸ್ವಾತಿ ಇನ್ನು ಮುಂದೆ ತಮಿಳು ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಲಿದ್ದಾರೆ.

ತಮಿಳಿನ ಈರಮಾನ ರೋಜಾವೇ ಸೀಸನ್ 2 ಶೀಘ್ರದಲ್ಲಿ ಆರಂಭವಾಗಲಿದ್ದು ಅದರಲ್ಲಿ ಪ್ರಧಾನ ಪಾತ್ರದಲ್ಲಿ ಸ್ವಾತಿ ಕೊಂಡೆ ಅಭಿನಯಿಸಲಿದ್ದಾರೆ. ಪ್ರಸ್ತುತ ಧಾರಾವಾಹಿಯಲ್ಲಿ ಪ್ರಿಯಾ ಆಗಿ ಸ್ವಾತಿ ನಟಿಸಲಿದ್ದು, ಇಬ್ಬರು ತಂಗಿಯರ ಮುದ್ದು ಅಕ್ಕ ಆಗಿ ಆಕೆ ಕಾಣಿಸಿಕೊಳ್ಳಲಿದ್ದಾರೆ. ಮನೆಯ, ತಂಗಿಯರ ಜವಬ್ದಾರಿಗಳ ಜೊತೆಗೆ ಆಶ್ರಮವನ್ನು ಕೂಡಾ ನೋಡಿಕೊಳ್ಳುತ್ತಾಳೆ.

ಹೊಸ ತಮಿಳು ಧಾರಾವಾಹಿಯ ಬಗ್ಗೆ ಮಾತನಾಡಿರುಗ ಸ್ವಾತಿ ಕೊಂಡೆ “ವಿಭಿನ್ನ ಪಾತ್ರದ ಮೂಲಕ ತಮಿಳು ಕಿರುತೆರೆಗೆ ಕಾಲಿಡುತ್ತಿದ್ದೇನೆ. ಒಂದರ್ಥದಲ್ಲಿ ಈ ಪಾತ್ರಕ್ಕೂ, ನಿಜಜೀವನಕ್ಕೂ ಒಂದು ರೀತಿಯ ಸಾಮ್ಯತೆ ಇದೆ. ರೀಲ್ ಲೈಫ್ ನಲ್ಲಿ ನನಗೆ ಇಬ್ಬರು ತಂಗಿಯಾದರೆ, ರಿಯಲ್ ಲೈಫ್ ನಲ್ಲಿ ನನಗೆ ಒಬ್ಬಳು ತಂಗಿಯಿದ್ದಾಳೆ. ಇನ್ನು ಈಗಾಗಲೇ ನನಗೆ ತಮಿಳು ಭಾಷೆ ಮಾತನಾಡಲು ಬರುವ ಕಾರಣ ಭಾಷೆಯ ತೊಂದರೆ ಯಾವತ್ತಿಗೂ ಆಗದು” ಎನ್ನುತ್ತಾರೆ ಸ್ವಾತಿ ಕೊಂಡೆ.

ಅಚನಾಕ್ ಆಗಿ ದೊರೆತ ಅವಕಾಶದಿಂದ ನಟನೆಗೆ ಕಾಲಿಟ್ಟ ಈಕೆ ಬ್ಯೂಟಿಫುಲ್ ಮನಸ್ಸುಗಳು ನಂತರ ಕಮರೊಟ್ಟು ಚೆಕ್ ಪೋಸ್ಟ್, ವೆನಿಲ್ಲಾ ಹಾಗೂ ಕಟ್ಟುಕತೆ ಸಿನಿಮಾಗಳಲ್ಲಿ ನಟಿಸಿದ್ದರು. ತದ ನಂತರ ಕಿರುತೆರೆಗೆ ಕಾಲಿಟ್ಟ ಈಕೆ ಇದೀಗ ಇಲ್ಲಿಯೇ ಬ್ಯುಸಿಯಾಗಿದ್ದಾರೆ.