• February 8, 2022

ತೆಲುಗು ಸಿನಿರಂಗ ಹೊಸತು ಎಂದ ಸುಪ್ರೀತಾ ಸತ್ಯನಾರಾಯಣ… ಯಾಕೆ ಗೊತ್ತಾ?

ತೆಲುಗು ಸಿನಿರಂಗ ಹೊಸತು ಎಂದ ಸುಪ್ರೀತಾ ಸತ್ಯನಾರಾಯಣ… ಯಾಕೆ ಗೊತ್ತಾ?

ಸೀತಾವಲ್ಲಭ ಧಾರಾವಾಹಿಯ ಮೈಥಿಲಿ ಖ್ಯಾತಿಯ ನಟಿ ಸುಪ್ರೀತಾ ಸತ್ಯನಾರಾಯಣ ಇದೀಗ ತೆಲುಗು ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಅನುಷ್ ಶೆಟ್ಟಿ ಬರೆದ ನೀನು ನಿನ್ನೊಳಗಿನ ಖೈದಿ ಎಂಬ ಕನ್ನಡ ಕಾದಂಬರಿ ಆಧಾರಿತವಾಗಿ ಬರುತ್ತಿರುವ ಇನ್ನೂ ಹೆಸರಿಡದ ತೆಲುಗು ಚಿತ್ರದಲ್ಲಿ ಸುಪ್ರೀತಾ ನಟಿಸಲಿದ್ದು, ಆ ಮೂಲಕ ಪರಭಾಷೆಯ ಸಿನಿರಂಗದಲ್ಲಿ ಕಮಾಲ್ ಮಾಡಲಿದ್ದಾರೆ.

ಅಜಯ್ ನಾಗ್ ವಿ ಅವರು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಮೋಹನ್ ಭಗತ್ ನಾಯಕನಾಗಿ ನಟಿಸುತ್ತಿದ್ದಾರೆ. ಸದ್ಯ ಈ ಚಿತ್ರದ ಶೂಟಿಂಗ್ ಶಿವಮೊಗ್ಗದಲ್ಲಿ ನಡೆಯುತ್ತಿದೆ. ಇನ್ನು ಚಿತ್ರದ ಬಗ್ಗೆ ಮಾತನಾಡಿರುವ ಸುಪ್ರೀತಾ ” ಈ ಚಿತ್ರ 1985ರಲ್ಲಿ ನಡೆಯುವ ಕತೆಯಾಗಿದ್ದು ಜೈಲಿನಿಂದ ಖೈದಿಯು ಹೇಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ ಎಂಬುದರ ಕುರಿತಾಗಿದೆ. ಇದು ಪ್ರಾಯೋಗಿಕ ಹಾಗೂ ಸಮಯ ಪ್ರಯಾಣ ಆಧಾರಿತ ಸಿನಿಮಾ ಆಗಿದೆ. ನಿರ್ದೇಶಕರು ಕಾದಂಬರಿಯನ್ನು ಅಳವಡಿಸಿಕೊಂಡು ಕಥಾಹಂದರವನ್ನು ದುರ್ಬಲಗೊಳಿಸದೇ ಕಥೆಯ ಮೂಲಕ್ಕೆ ಹತ್ತಿರವಾಗಿದ್ದಾರೆ. ಈ ಸಿನಿಮಾದಲ್ಲಿ ಒಂದಷ್ಟು ಕಮರ್ಷಿಯಲ್ ಅಂಶಗಳಿವೆ. ಆಶ್ಚರ್ಯಕರ ಸಂಗತಿಯೆಂದರೆ ಕೆಲವು ತಿಂಗಳ ಹಿಂದೆ ನಾನು ಈ ಕಾದಂಬರಿ ಓದಿದ್ದೆ. ಇದೀಗ ಅದೇ ಪಾತ್ರ ದೊರೆತಾಗ ನಿಜಕ್ಕೂ ಆಶ್ಚರ್ಯವಾಯಿತು” ಎಂದಿದ್ದಾರೆ.

ಇನ್ನು ಪಾತ್ರದ ಕುರಿತು ಹೇಳಿರುವ ಸುಪ್ರೀತಾ” ನಾನು ಈ ಚಿತ್ರದಲ್ಲಿ ಶಾರದಾ ಎಂಬ ಪಾತ್ರವನ್ನು ನಿರ್ವಹಿಸಲಿದ್ದೇನೆ. ಫಿಸಿಕ್ಸ್ ನಲ್ಲಿ ಪದವಿ ಓದಿ ವಿಜ್ಞಾನಿಯಾಗಿರುತ್ತಾಳೆ” ಎಂದು ಹೇಳುತ್ತಾರೆ. ಇನ್ನು “ತೆಲುಗು ಸಿನಿರಂಗ ನನಗೆ ಹೊಸತು. ಈಗೀಗ ನಾನು ತೆಲುಗು ಭಾಷೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲೆ. ಮಾತ್ರವಲ್ಲ ಜೊತೆಗೆ ತೆಲುಗು ಭಾಷೆಯನ್ನು ಕಲಿಯಲು ಆರಂಭಿಸಿದ್ದೇನೆ. ಬರೋಬ್ಬರಿ 20 ಸಾಲುಗಳ ಡೈಲಾಗ್ ನ್ನು ಹೇಳಿದಾಗ ಸೆಟ್ ನಲ್ಲಿ ಎಲ್ಲರೂ ಇಂಪ್ರೆಸ್ ಆದರು. ತಂಡದಲ್ಲಿದ್ದವರ ಪ್ರೋತ್ಸಾಹದಿಂದ ನನಗೆ ಶೂಟಿಂಗ್ ಸುಲಭವಾಗಿದೆ” ಎಂದಿದ್ದಾರೆ.

ಭೂಷಣ್ ಕಲ್ಯಾಣ್ , ಸುರಭಿ ಪ್ರಭಾವತಿ , ರವೀಂದ್ರ ವಿಜಯ್ , ಉಮಾ ಮಹೇಶ್ವರ ರಾವ್ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ದೇವ್ ದೀಪ್ ಅವರ ಸಿನಿಮಾಟೋಗ್ರಫಿ , ಮಿಥುನ್ ಮುಕುಂದನ್ ಅವರ ಸಂಗೀತ ಇರಲಿದ್ದು ಈ ಸಿನಿಮಾ ಕನ್ನಡ, ಮಲೆಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಡಬ್ ಆಗಲಿದೆ.