• March 21, 2022

ಖಳನಾಯಕಿಯಾಗಿ ಸೈ ಎನಿಸಿಕೊಂಡಿರುವ ಸುಕೃತಾ ನಾಗ್ ಹೇಳಿದ್ದೇನು ಗೊತ್ತಾ?

ಖಳನಾಯಕಿಯಾಗಿ ಸೈ ಎನಿಸಿಕೊಂಡಿರುವ ಸುಕೃತಾ ನಾಗ್ ಹೇಳಿದ್ದೇನು ಗೊತ್ತಾ?

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ ಅಗ್ನಿಸಾಕ್ಷಿಯೂ ಒಂದು. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಾಯಕ ಸಿದ್ಧಾರ್ಥ್ ತಂಗಿ ಅಂಜಲಿಯಾಗಿ ಅಭಿನಯಿಸಿದ್ದ ಸುಕೃತಾ ನಾಗ್ ಲಕ್ಷಣ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವುದು ವೀಕ್ಷಕರಿಗೆ ತಿಳಿದೇ ಇದೆ. ಲಕ್ಷಣ ಧಾರಾವಾಹಿಯಲ್ಲಿ ಖಳನಾಯಕಿ ಶ್ವೇತಾ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದ ಸುಕೃತಾ ಗೆ ವೀಕ್ಷಕರ ಮೆಚ್ಚುಗೆಗಿಂತ ಬೈಗಳು ಸಿಕ್ಕಿದ್ದೇ ಜಾಸ್ತಿ.

ಮೊದಲ ಬಾರಿಗೆ ಖಳನಾಯಕಿ ಆಗಿ ನಟಿಸಿದರೂ ಸೀರಿಯಲ್ ಪ್ರಿಯರ ಮನ ಸೆಳೆಯುವಲ್ಲಿ ಯಶಸ್ವಿಯಾಗಿರುವ ಸುಕೃತಾ ನಾಗ್ “ಶ್ವೇತಾ ಆಗಿ ನಟಿಸುವುದಕ್ಕೆ ಮೊದಲ ಬಾರಿ ನಿಜವಾಗಿಯೂ ತುಂಬಾನೇ ಕಷ್ಟವಾಗಿತ್ತು. ಅಗ್ನಿಸಾಕ್ಷಿಯ ಅಂಜಲಿ ಪಾತ್ರದಿಂದಲೇ ವೀಕ್ಷಕರು ನನ್ನನ್ನು ಗುರುತಿಸುತ್ತಿದ್ದರು. ಮಾತ್ರವಲ್ಲ ಆ ಪಾತ್ರವನ್ನು ಕೂಡಾ ಅವರು ಇಷ್ಟಪಟ್ಟಿದ್ದರು. ಇದೀಗ ಸಡನ್ ಆಗಿ ನೆಗೆಟಿವ್ ರೋಲ್ ಎಂದಾಗ ವೀಕ್ಷಕರು ಸ್ವೀಕರಿಸುತ್ತಾರಾ ಎಂಬ ಭಯ ಇತ್ತು. ಮೊದಮೊದಲು ನನ್ನ ನಟನೆಗೆ ಬೈಗುಳ ಸಿಕ್ತಿತ್ತು. ಆದರೆ ಈಗ ಅವರೇ ನನ್ನ ನಟನೆಯನ್ನು ಹೊಗಳುತ್ತಿದ್ದಾರೆ” ಎಂದು ಹೇಳುತ್ತಾರೆ.

“ಧಾರಾವಾಹಿ ನಟ, ನಿರ್ಮಾಪಕ ಜಗನ್ ಅವರು ಫೋನ್ ಮಾಡಿ ಪಾತ್ರದ ಬಗ್ಗೆ ಹೇಳಿದಾಗ ನನಗೆ ಆಶ್ಚರ್ಯವಾಯಿತು. ಯಾಕೆಂದರೆ ನನ್ನ ಮುಖ ಚಿಕ್ಕದಾಗಿದೆ. ಸೋ ನಾನು ವಿಲನ್ ಆಗಿ ನಟಿಸುವುದಕ್ಕೆ ಸಾಧ್ಯನಾ ಎಂಬ ಅನುಮಾನ ಮೂಡಿತ್ತು. ಜೊತೆಗೆ ನಾನು ಜಗನ್ ಅವರ ಬಳಿಯೇ ನಿಮಗೆ ನಾನು ಶ್ವೇತಾ ಪಾತ್ರದಲ್ಲಿ ನಟಿಸಬಲ್ಲೆಯಾ ಎಂಬ ನಂಬಿಕೆ ಇದೆಯಾ ಎಂದು ಕೇಳಿದ್ದೆ” ಎಂದು ಹೇಳುತ್ತಾರೆ ಸುಕೃತಾ ನಾಗ್.

“ನಟನೆ ಎಂದ ಮೇಲೆ, ನಟಿ ಎಂದ ಮೇಲೆ ಯಾವುದೇ ಪಾತ್ರ ದೊರೆತರೂ ಸರಿ ಅದಕ್ಕೆ ಜೀವ ತುಂಬಲು ತಯಾರಾಗಿರಬೇಕು‌. ಒಂದೇ ಪಾತ್ರಕ್ಕೆ ಬ್ರಾಂಡ್ ಆಗುವುದಂತೂ ನನಗೆ ಇಷ್ಟವೇ ಇಲ್ಲ. ಜೊತೆಗೆ ಬೇರೆ ಬೇರೆ ಪಾತ್ರಗಳಾದರೆ ನಟಿಸುವ ಅವಕಾಶವೂ ಜಾಸ್ತಿ ಇರುತ್ತದೆ. ಮಾತ್ರವಲ್ಲ ಸದಾ ಹೊಸ ಹೊಸ ವಿಚಾರಗಳನ್ನು ಕಲಿಯಲು ಸಾಧ್ಯವಾಗುತ್ತದೆ” ಎನ್ನುವ ಸುಕೃತಾ ನಾಗ್ ಈಗಾಗಲೇ ಪಾರ್ಟ್ನರ್ ಸಿನಿಮಾದಲ್ಲಿ ನಟಿಸಿದ್ದು ಸದ್ಯದಲ್ಲಿಯೇ ಅದು ಬಿಡುಗಡೆಯಾಗಲಿದೆ.