- May 2, 2022
ಕನ್ನಡ ಹುಡುಗಿಯಾಗಿ ಗುರುತಿಸಿಕೊಳ್ಳೋದಕ್ಕೆ ಖುಷಿಯಿದೆ – ಶ್ರೀಲೀಲಾ


ಸದ್ಯ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ಶ್ರೀಲೀಲಾ ಹಲವು ಸಿನಿಮಾ ಒಪ್ಪಿಕೊಂಡಿದ್ದಾರೆ. ಕಿಸ್ ಸಿನಿಮಾ ಮೂಲಕ ಕೆರಿಯರ್ ಆರಂಭಿಸಿದ ಶ್ರೀಲೀಲಾ ಈಗ ಟಾಲಿವುಡ್ ನಲ್ಲಿ ಬೇಡಿಕೆಯ ನಟಿ.
“ನಾನು ಚಿಕ್ಕವಳಿದ್ದಾಗಿನಿಂದಲೂ ತಾಳ್ಮೆ ಎಂಬುದು ನನ್ನ ದೊಡ್ಡ ಗುಣಗಳಲ್ಲಿ ಒಂದಾಗಿದೆ. ಅನೇಕ ನಟರು ಇದನ್ನು ಹೇಳುತ್ತಾರೆಂದು ನನಗೆ ತಿಳಿದಿದೆ. ಆದರೆ ನಿಜವಾಗಿ ಸಿನಿಮಾ ಕ್ಷೇತ್ರಕ್ಕೆ ನಾನು ಆಕಸ್ಮಿಕವಾಗಿ ಕಾಲಿಟ್ಟೆ. ನಾನು ನನ್ನ ನಡೆಗಳ ಬಗ್ಗೆ ಪ್ಲಾನ್ ಮಾಡಿಲ್ಲ” ಎಂದಿದ್ದಾರೆ.


“ನಾನು ದಿನವೂ ಶಾಲೆಗೆ ಹೋಗುವ ಹುಡುಗಿಯಾಗಿದ್ದೆ. ಕುಟುಂಬದಲ್ಲಿ ಫಂಕ್ಷನ್ ನಂತರ ಫೋಟೋ ತೆಗೆಯಲಾಗುತ್ತಿತ್ತು. ಭುವನ್ ಗೌಡ ಫೋಟೋ ತೆಗೆಯುತ್ತಿದ್ದರು. ಅವರು ಸಿನಿಮಾಟೋಗ್ರಾಫರ್ ಆಗುವ ಮೊದಲು ಉತ್ತಮ ಫೋಟೋಗ್ರಾಫರ್ ಆಗಿದ್ದರು. ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡುತ್ತಿದ್ದರು. ಅರ್ಜುನ್ ಅಣ್ಣ ಇದನ್ನು ನೋಡಿ ಅಮ್ಮನ ಬಳಿ ಮಾತನಾಡಿ ಮನೆಗೆ ಬಂದರು. ನಾನು ಅತಿಥಿಗಳನ್ನು ರಂಜಿಸಲು ಡ್ಯಾನ್ಸ್ , ಹಾಡು ಹೀಗೆ ಜನರನ್ನು ನಗಿಸಲು ಬೇಕಾದ ರಂಜನೆ ಮಾಡುತ್ತಿದ್ದೆ. ಅರ್ಜುನ್ ಬಂದಾಗಲೂ ಹೀಗೆ ಮಾಡಿದ್ದೆ. ಹೀಗಾಗಿ ನನ್ನನ್ನು ಕಿಸ್ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದರು ಅನಿಸುತ್ತೆ” ಎಂದು ನಗುತ್ತಾರೆ.


“ಮನೆಯಲ್ಲಿ ಕೆಲವರು ಒಪ್ಪಲಿಲ್ಲ. ಇನ್ನು ಕೆಲವರು ಎಲ್ಲರಿಗೂ ಈ ಅವಕಾಶ ಸಿಗಲ್ಲ ಎಂದರು. ನನ್ನ ತಾಯಿಗೆ ಅವರು ಓದುತ್ತಿರುವಾಗ ಸಿನಿಮಾ ಅವಕಾಶಗಳು ಬಂದಿದ್ದವು. ಆದರೆ ಅವರು ಇದನ್ನು ತೆಗೆದುಕೊಂಡು ಇರಲಿಲ್ಲ. ನನಗೆ ಅವಕಾಶ ಬಂದಾಗ ಅಜ್ಜನ ಬಳಿ ಕೇಳಿದೆ. ಅವರು ಆಶೀರ್ವಾದ ಮಾಡಿದರು. ಅವರು ಓದನ್ನು ಒಳಗೊಂಡಂತೆ ಜೀವನದಲ್ಲಿ ಎಲ್ಲವನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುವಂತೆ ಸಲಹೆ ಕೊಟ್ಟರು” ಎನ್ನುತ್ತಾರೆ ಶ್ರೀಲೀಲಾ.


ಹತ್ತನೆಯ ತರಗತಿಯಲ್ಲಿ ಮೊದಲ ಸಿನಿಮಾ ಮಾಡಿದ್ದ ಶ್ರೀಲೀಲಾ ಅವರಿಗೆ ಶೂಟಿಂಗ್ ಮುಗಿಸಿ ಬಂದಾಗ ರಜೆ ಎಂದು ಅನಿಸುತ್ತಿತ್ತಂತೆ. ನನಗೆ ಸಿನಿಮಾ ಕುರಿತು ಐಡಿಯಾ ಇರಲಿಲ್ಲ. ಸ್ಕೂಲ್ ಮುಗಿಸಿ ಬಂದು ಈಜು, ಡ್ಯಾನ್ಸ್ ಮುಂತಾದ ತರಗತಿಗಳಿಗೆ ಹೋಗುತ್ತಿದ್ದೆ. ಥಿಯೇಟರ್ ನಲ್ಲಿ ಸಿನಿಮಾ ನೋಡಿರಲಿಲ್ಲ. ಡ್ಯಾನ್ಸ್ ಕಾರಣಕ್ಕೆ ಮಾಧುರಿ ದೀಕ್ಷಿತ್ ಬಗ್ಗೆ ಗೊತ್ತಿತ್ತು ಎಂದಿದ್ದಾರೆ.


ಸದ್ಯ ಕನ್ನಡವಲ್ಲದೇ ತೆಲುಗಿನಲ್ಲಿ ನಟಿಸುತ್ತಿರುವ ಶ್ರೀಲೀಲಾ ಕನ್ನಡದ ಹುಡುಗಿಯಾಗಿ ಗುರುತಿಸಿಕೊಳ್ಳುತ್ತಿರುವುದಕ್ಕೆ ಹೆಮ್ಮೆ ಇದೆ ಎಂದಿದ್ದಾರೆ. ರವಿತೇಜಾ ಅವರೊಂದಿಗೆ ಧಮಾಕಾ ಸಿನಿಮಾದ ಶೂಟಿಂಗ್ ನಲ್ಲಿ ಇರುವ ಶ್ರೀಲೀಲಾ ತಾಯಿ ಸ್ವರ್ಣಲತಾ ಅವರಿಗೆ ಕ್ರೆಡಿಟ್ ನೀಡುತ್ತಾರೆ. “ಅವರು ನನ್ನ ಬೆನ್ನೆಲುಬು. ನನಗೆ ಫೋಕಸ್ ಮಾಡುವುದನ್ನು ಕಲಿಸಿದ್ದಾರೆ. ಮೆಡಿಕಲ್ ಕೋರ್ಸ್ ಮುಗಿಸಿ ಮದುವೆಯಾದರು. ಹದಿನೈದು ವರ್ಷಗಳ ಬಳಿಕ ವೃತ್ತಿಯಾಗಿ ತೆಗೆದುಕೊಂಡಿರಲಿಲ್ಲ. ವೃತ್ತಿಗೆ ಮರಳಿದ ಬಳಿಕ ತಿರುಗಿ ನೋಡಲಿಲ್ಲ. ಈಗ ಬೆಸ್ಟ್ ಡಾಕ್ಟರ್ ಆಗಿದ್ದಾರೆ. ವೃತ್ತಿ ಹಾಗೂ ವೈಯಕ್ತಿಕ ಬದುಕನ್ನು ಸಮತೋಲನದಿಂದ ನಡೆಸಲು ನನಗೆ ಕಲಿಸಿದ್ದಾರೆ” ಎಂದಿದ್ದಾರೆ.


ಮೆಡಿಕಲ್ ಕೋರ್ಸ್ ಕಲಿತಿದ್ದನ್ನು ಹಾಳಾಗಲು ಬಿಡುವುದಿಲ್ಲ. ಭವಿಷ್ಯದಲ್ಲಾದರೂ ಈ ವೃತ್ತಿ ಮಾಡುತ್ತೇನೆ. ನನಗೆ ಜನರಿಗೆ ಸಹಾಯ ಮಾಡಲು ಇಷ್ಟ ಎಂದಿದ್ದಾರೆ.


ಇಶಾ ಫೌಂಡೇಶನ್ ನ ಮಹಾ ಶಿವರಾತ್ರಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವ ಶ್ರೀಲೀಲಾ ತುಂಬಾ ಜನ ನಾನು ಈ ವಯಸ್ಸಿನಲ್ಲಿ ಆಧ್ಯಾತ್ಮಿಕದತ್ತ ವಾಲಿರುವುದಕ್ಕೆ ಆಶ್ಚರ್ಯಗೊಂಡಿದ್ದಾರೆ. ಇದಕ್ಕೆ ವಯಸ್ಸಿನ ಹಂಗಿಲ್ಲ ಎಂದಿದ್ದಾರೆ.




