- April 13, 2022
ಬಹುಕಾಲದ ಕನಸು ನನಸಾಗಿದೆ ಎಂದ ಕರಾವಳಿ ಕುವರಿ


ಕೋಸ್ಟಲ್ ವುಡ್ ನಲ್ಲಿ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟು ಮನೋಜ್ಞ ನಟನೆಯ ಮೂಲಕ ಕರಾವಳಿಯಲ್ಲಿ ಮನೆ ಮಾತಾಗಿರುವ
ಸೋನಲ್ ಮೊಂತೆರೋ ಚಂದನವನದಲ್ಲಿ ಮಿಂಚಿದ ಚೆಲುವೆ. ಸಾಲು ಸಾಲು ಕನ್ನಡ ಸಿನಿನಾಗಳಲ್ಲಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿರುವ ಕಡಲನಗರಿ ಕುವರಿ ಈಗ ಬಾಲಿವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.


ಸಂಗೀತ ನಿರ್ದೇಶಕ ವಿನಯ್ ಚಂದ್ರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸರೋಜಿನಿ ನಾಯ್ಡು ಅವರ ಜೀವನಾಧಾರಿತ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು ಶಾಂತಿಪ್ರಿಯ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸರೋಜಿನಿ ನಾಯ್ಡು ಅವರು ಯುವತಿಯಾಗಿರುವ ಸಂದರ್ಭದ ಪಾತ್ರವನ್ನು ಸೋನಲ್ ನಿರ್ವಹಿಸಲಿದ್ದಾರೆ.


ಭಾರತದ ಕೋಗಿಲೆ ಎಂದೇ ಖ್ಯಾತಿ ಪಡೆದಿರುವ ಸರೋಜಿನಿ ನಾಯ್ಡು ಅವರ ಜೀವನಾಧಾರಿತ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಹಾಗೂ ಬಾಲಿವುಡ್ ನಲ್ಲಿ ಅವಕಾಶ ಪಡೆದಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಸೋನಲ್ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. “ಬಾಲಿವುಡ್ ನಲ್ಲಿ ನಟಿಸುವುದು ನನ್ನ ಬಹುಕಾಲದ ಕನಸು ಈಗ ನನಸಾಗುತ್ತಿದೆ” ಎಂದಿದ್ದಾರೆ ಸೋನಲ್.


ಈ ಸಿನಿಮಾದ ಶೂಟಿಂಗ್ ಜೂನ್ ತಿಂಗಳಲ್ಲಿ ಆರಂಭವಾಗಲಿದ್ದು ಉತ್ತರ ಪ್ರದೇಶ, ಮುಂಬೈ, ಬೆಂಗಳೂರು ಹಾಗೂ ಕೊಡಗಿನ ಕೆಲವು ಪ್ರದೇಶಗಳಲ್ಲಿ ಶೂಟಿಂಗ್ ನಡೆಯಲಿದೆ ಎಂದಿದ್ದಾರೆ ನಿರ್ದೇಶಕ ವಿನಯ್ ಚಂದ್ರ.








