• April 3, 2022

ನಾಲ್ಕು ವರ್ಷಗಳ ಬಳಿಕ ತೆರೆ ಮೇಲೆ ಸೋನಾಲಿ ಬೇಂದ್ರೆ

ನಾಲ್ಕು ವರ್ಷಗಳ ಬಳಿಕ ತೆರೆ ಮೇಲೆ ಸೋನಾಲಿ ಬೇಂದ್ರೆ

ಬಾಲಿವುಡ್ ಖ್ಯಾತ ನಟಿ ಸೋನಾಲಿ ಬೇಂದ್ರೆ ಕ್ಯಾನ್ಸರ್ ಗೆ ತುತ್ತಾಗಿದ್ದರು. ಚಿಕಿತ್ಸೆ ಪಡೆದುಕೊಂಡು ಸಂಪೂರ್ಣ ಗುಣಮುಖರಾಗಿರುವ ಸೋನಾಲಿ ಬೇಂದ್ರೆ ಈಗ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಕ್ಯಾನ್ಸರ್ ನಿಂದ ಬಳಲುವ ಹಲವು ಮಂದಿಗೆ ಸ್ಪೂರ್ತಿ ಆಗಿರುವ ಸೋನಾಲಿ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.

ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಲಿಟ್ಲ್ ಮಾಸ್ಟರ್ಸ್ 5 ಶೋನ ತೀರ್ಪುಗಾರರಲ್ಲಿ ಒಬ್ಬರಾಗಿದ್ದ ಸೋನಾಲಿ 2018ರಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ರಿಯಾಲಿಟಿ ಶೋ ನಿಂದ ಹೊರನಡೆದಿದ್ದರು. ನಾಲ್ಕು ವರ್ಷಗಳ ಬಳಿಕ ಈಗ ಮತ್ತೆ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ್ದಾರೆ ಸೋನಾಲಿ.

“ಕಳೆದ ನಾಲ್ಕು ವರ್ಷ ಕೆಲಸದಿಂದ ಬ್ರೇಕ್ ಪಡೆದುಕೊಂಡಿದ್ದೆ. ನನ್ನ ಚಿಕಿತ್ಸೆಗಾಗಿ ಮಕ್ಕಳ ಶೋ ಬಿಟ್ಟಿದ್ದೆ. ಈಗ ಇನ್ನೊಂದು ಶೋಗಾಗಿ ಕಿರುತೆರೆಯತ್ತ ಮರಳಿ ಬಂದಿದ್ದೇನೆ. ಮತ್ತೆ ಕೆಲಸ ಆರಂಭಿಸಿರುವುದಕ್ಕೆ ಖುಷಿ ಇದೆ. ಯಾವುದನ್ನು ಅರ್ಧದಲ್ಲಿ ಬಿಟ್ಟು ಕುರ್ಚಿಯಿಂದ ಎದ್ದು ಹೊರ ನಡೆದಿದ್ದೆನೋ ಈಗ ಮತ್ತೆ ಅಲ್ಲಿ ಬಂದು ಕುಳಿತಿರುವುದು ಪುಣ್ಯದ ವಿಷಯ. ಈಗ ತಾನೇ ಕೆರಿಯರ್ ಶುರು ಮಾಡಿದ್ದೇನೆ ಎಂದೆನಿಸುತ್ತದೆ. ಕಲಿಯಲು ಸಾಕಷ್ಟಿವೆ. ಸವಾಲುಗಳು ಇವೆ” ಎಂದಿದ್ದಾರೆ.

“ನಾನು ಇಂದು ಏನೇ ಆಗಿದ್ದರೂ ಅದಕ್ಕೆ ಮುಖ್ಯ ಕಾರಣ ಬಾಲಿವುಡ್ ” ಎನ್ನುವ ಸೋನಾಲಿ ಬೇಂದ್ರೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ ದಿನಗಳ ಬಗ್ಗೆ ಹೀಗೆ ಹೇಳಿಕೊಂಡಿದ್ದರು. “ಆ ದಿನ ಹೈಗ್ರೇಡ್ ಕ್ಯಾನ್ಸರ್ ಬಂದಿದೆ ಎಂದು ಗೊತ್ತಾದಾಗ ರಾತ್ರಿ ಪೂರ್ತಿ ಅತ್ತಿದ್ದೆ. ಪತಿ ಹಾಗೂ ಮಗ ನೆನಪಾದರು. ಕುಟುಂಬ ಬಿಟ್ಟು ಹೊರಟು ಹೋಗುತ್ತೇನೆ ಎಂಬ ಭಯ ಇತ್ತು. ಇನ್ನೆಂದೂ ಅಳಬಾರದು, ನೋವು ಅನುಭವಿಸಬಾರದು ಎಂದು ಡಿಸೈಡ್ ಮಾಡಿ ನಗುತ್ತೇನೆ. ನನ್ನ ಕುಟುಂಬ ಸಹಕಾರ ನೀಡಿದೆ” ಎಂದಿದ್ದಾರೆ.

ಕನ್ನಡದಲ್ಲಿ ಪ್ರೀತ್ಸೆ ಸಿನಿಮಾದಲ್ಲಿ ನಟಿಸಿರುವ ಸೋನಾಲಿ ಈಗ ಸಿನಿಮಾಕ್ಕೂ ಕಮ್ ಬ್ಯಾಕ್ ಮಾಡುತ್ತಿದ್ದಾರೆ.