• June 14, 2022

ಹೊಸ ಇನ್ನಿಂಗ್ಸ್ ಶುರು ಮಾಡಿದ ಕೊಡಗಿನ ಕುವರಿ

ಹೊಸ ಇನ್ನಿಂಗ್ಸ್ ಶುರು ಮಾಡಿದ ಕೊಡಗಿನ ಕುವರಿ

ಮಜಾಟಾಕೀಸ್ ನ ರಾಣಿಯಾಗಿ ಕಿರುತೆರೆ ಎಂಬ ಪುಟ್ಟ ಪ್ರಪಂಚದಲ್ಲಿ ದೊಡ್ಡ ಹವಾವನ್ನೇ ಸೃಷ್ಟಿ ಮಾಡಿದ್ದ ಕೊಡಗಿನ ಬೆಡಗಿ ಶ್ವೇತಾ ಚೆಂಗಪ್ಪ ಎರಡು ವರ್ಷಗಳ ಬಳಿಕ ಮತ್ತೆ ಮರಳಿದ್ದಾರೆ. ಮಜಾಟಾಕೀಸ್ ನ ರಾಣಿ ಪಾತ್ರದ ಮೂಲಕ ವಾರಾಂತ್ಯದಲ್ಲಿ ಕಿರುತೆರೆ ವೀಕ್ಷಕರಿಗೆ ಮಜಾ ನೀಡಿ ನಗೆಗಡಲಲ್ಲಿ ತೇಲಿಸುತ್ತಿದ್ದ ಶ್ವೇತಾ ಗರ್ಭಿಣಿಯಾದ ಕಾರಣ ಮಜಾ ಟಾಕೀಸ್ ನಿಂದ ಹೊರಬಂದಿದ್ದರು.

ನಂತರ ಮಗ ಜಿಯಾನ್ ಅಯ್ಯಪ್ಪ ನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದ ಶ್ವೇತಾ ಮಗನ ಸಲುವಾಗಿ ಬಣ್ಣದ ಲೋಕದಿಂದ ಬ್ರೇಕ್ ಪಡೆದುಕೊಂಡಿದ್ದರು. ಇತ್ತೀಚೆಗಷ್ಟೇ ತಮ್ಮ ಮಗನನ್ನು ಶಾಲೆಗೆ ಸೇರಿಸಿದ್ದು ಈಗ ಈಕೆಯೂ ಕೂಡಾ ಮತ್ತೆ ಬಣ್ಣ ಹಚ್ಚಿ ಕ್ಯಾಮೆರಾ ಮುಂದೆ ಬರಲು ತಯಾರಾಗಿದ್ದಾರೆ.

ಈ ಸಂತಸದ ವಿಚಾರವನ್ನು ಸ್ವತಃ ಶ್ವೇತಾ ಚೆಂಗಪ್ಪ ಅವರೇ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಕಳೆದ ವಾರಾಂತ್ಯದಿಂದ ಆರಂಭಗೊಂಡಿರುವ ಹೊಚ್ಚ ಹೊಸ ರಿಯಾಲಿಟಿ ಶೋ ಜೋಡಿ ನಂ 1 ನ ನಿರೂಪಕಿಯಾಗಿ ಕಿರುತೆರೆಯಲ್ಲಿ ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ ಶ್ವೇತಾ ಚೆಂಗಪ್ಪ.

‌ನಟಿಯಾಗಿ ಕಿರುತೆರೆಗೆ ಕಾಲಿಟ್ಟ ಮಂಜಿನ ನಗರಿಯ ಶ್ವೇತಾ ಚೆಂಗಪ್ಪ ಮುಂದಿನ ದಿನಗಳಲ್ಲಿ ನಿರೂಪಕಿಯಾಗಿ ಮೋಡಿ ಮಾಡಿದ ಚೆಲುವೆ. ಎಸ್. ನಾರಾಯಣ್ ನಿರ್ದೇಶನದಡಿಯಲ್ಲಿ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸುಮತಿ ಧಾರಾವಾಹಿಯಲ್ಲಿ ನಾಯಕಿ ಸುಮತಿ ಯಾಗಿ ನಟಿಸಿದ್ದ ಶ್ವೇತಾ ಎರಡು ವರ್ಷಗಳ ಕಾಲ ಆ ಪಾತ್ರದ ಮೂಲಕ ವೀಕ್ಷಕರನ್ನು ರಂಜಿಸಿದರು.

ಮುಂದೆ ಬಾಲಾಜಿ ಟೆಲಿ ಫಿಲಂಸ್ ನಡಿಯಲ್ಲಿ ಉದಯ ವಾಹಿನಿಯಲ್ಲಿ ಪ್ರಸಾರ ಕಂಡ ಕಾದಂಬರಿ ಧಾರಾವಾಹಿಯಲ್ಲಿಯೂ ನಾಯಕಿ ಕಾದಂಬರಿ ಆಗಿ ನಟಿಸಿದ್ದ ಆಕೆ ಕರ್ನಾಟಕದಾದ್ಯಂತ ಮನೆ ಮಾತಾದರು. ಇದರ ಜೊತೆಗೆ ಈ ಟಿವಿ ಕನ್ನಡದಲ್ಲಿ 2008 ರಲ್ಲಿ ತೆರೆ ಕಂಡ ಸುಕನ್ಯಾ ಹಾಗೂ 2010ರಲ್ಲಿ ತೆರೆ ಕಂಡ ಅರುಂಧತಿ ಧಾರಾವಾಹಿಯಲ್ಲಿಯೂ ಪ್ರಧಾನ ಪಾತ್ರದಲ್ಲಿ ನಟಿಸಿದ್ದ ಈಕೆ ಅಲ್ಲೂ ಸೈ ಎನಿಸಿಕೊಂಡರು.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಯಾರಿಗುಂಟು ಯಾರಿಗಿಲ್ಲ ಕಾರ್ಯಕ್ರಮದ ನಿರೂಪಣೆ ಮಾಡುವ ಮೂಲಕ ನಿರೂಪಕಿಯಾಗಿ ಭಡ್ತಿ ಪಡೆದಿರುವ ಈಕೆ ಮುಂದೆ ಜೀ ಕನ್ನಡದ ಕುಣಿಯೋಣು ಬಾರಾ, ಸ್ಟಾರ್ ಸುವರ್ಣ ವಾಹಿನಿಯ ಡ್ಯಾನ್ಸ್ ಡ್ಯಾನ್ಸ್ ನ ನಿರೂಪಕಿಯಾಗಿ ಕಾಣಿಸಿಕೊಂಡರು.

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 2 ರ ಸ್ಪರ್ಧಿಯಾಗಿದ್ದ ಈಕೆ 4ನೇ ಸ್ಥಾನವನ್ನು ಪಡೆದುಕೊಂಡಿದ್ದ ಈಕೆ ತಂಗಿಗಾಗಿ ಹಾಗೂ ವರ್ಷ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಸೆಂಚುರಿ ಸ್ಟಾರ್ ಅಭಿನಯದ ವೇದ ಸಿನಿಮಾದಲ್ಲಿ ಆಕೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.