• February 13, 2022

ವಿಕಲಾಂಗ ಮಕ್ಕಳನ್ನು ದತ್ತು ಪಡೆದ ಕಿಸ್ ಬೆಡಗಿ… ಎರಡು ಮಕ್ಕಳ ತಾಯಿಯಾದ ಶ್ರೀಲೀಲಾ

ವಿಕಲಾಂಗ ಮಕ್ಕಳನ್ನು ದತ್ತು ಪಡೆದ ಕಿಸ್ ಬೆಡಗಿ… ಎರಡು ಮಕ್ಕಳ ತಾಯಿಯಾದ ಶ್ರೀಲೀಲಾ

ಕಿಸ್ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟ ನಟಿ ಶ್ರೀಲೀಲಾ ಈಗ ಸಿನಿಮಾದ ಹೊರತಾಗಿ ಸಾಮಾಜಿಕ ಕಾರ್ಯಕ್ರಮದ ಮೂಲಕವೂ ಸುದ್ದಿಯಲ್ಲಿದ್ದಾರೆ. ಹೌದು, ಶ್ರಿಲೀಲಾ ಅವರು ಅನಾಥಾಶ್ರಮದಿಂದ ಇಬ್ಬರು ವಿಕಲಾಂಗ ಮಕ್ಕಳನ್ನು ದತ್ತು ಪಡೆದಿದ್ದಾರೆ. ಗುರು ಎಂಬ ಹತ್ತು ತಿಂಗಳಿನ ಹುಡುಗ ಹಾಗೂ ಶೋಭಿತ ಎಂಬ ಹುಡುಗಿಯನ್ನು ದತ್ತು ಪಡೆದಿರುವ ಶ್ರೀಲೀಲಾ ಸ್ವಲ್ಪ ಹೊತ್ತು ಆಶ್ರಮದ ಮಕ್ಕಳೊಂದಿಗೆ ಕಾಲ ಕಳೆದಿದ್ದಾರೆ. ಶ್ರೀಲೀಲಾ ಅವರ ಮಹತ್ಕಾರ್ಯವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ.

“ಬೈ ಟು ಲವ್” ಸಿನಿಮಾದಲ್ಲಿ ನಟಿಸಿರುವ ಶ್ರೀಲೀಲಾ ಸದ್ಯ ಸಿನಿಮಾ ಪ್ರಚಾರದ ಬ್ಯುಸಿಯಲ್ಲಿದ್ದಾರೆ. ಈ ನಡುವೆ ಶ್ರೀಲೀಲಾ ಅವರು ಆಶ್ರಮಕ್ಕೆ ತೆರಳಿದ್ದು ಅಲ್ಲಿನ ಮಕ್ಕಳ ಸ್ಥಿತಿ ಕಂಡು ಭಾವುಕರಾದರು‌. ಮಾತ್ರವಲ್ಲ ಶ್ರೀಲೀಲಾ ಅವರು ಇಬ್ಬರು ವಿಕಲಾಂಗ ಮಕ್ಕಳನ್ನು ದತ್ತು ಪಡೆಯುವ ನಿರ್ಧಾರವನ್ನು ಕೈಗೊಂಡು ಇತರರಿಗೆ ಮಾದರಿಯಾಗಿದ್ದಾರೆ. ಅಚ್ಚರಿಯ ವಿಚಾರವೆಂದರೆ ಚೆಂದುಳ್ಳಿ ಚೆಲುವೆ ಬೈಟು ಲವ್ ಸಿನಿಮಾದಲ್ಲಿ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ. ಇದೇ 18ಕ್ಕೆ ಚಿತ್ರ ತೆರೆಗೆ ಬರಲಿದೆ.

ಕಿಸ್ ಸಿನಿಮಾ ಮೂಲಕ ಕೆರಿಯರ್ ಆರಂಭಿಸಿದ ಶ್ರೀಲೀಲಾ ಭರಾಟೆ ಚಿತ್ರದಲ್ಲಿ ನಟಿಸಿದರು. ಪೆಲ್ಲಿ ಸಂದಡಿ ಚಿತ್ರದ ಮೂಲಕ ಟಾಲಿವುಡ್ ಗೆ ಕಾಲಿಟ್ಟ ಇವರು ರವಿ ತೇಜ ಜೊತೆಗೆ ಧಮಾಕಾ ದಲ್ಲಿ ನಟಿಸುತ್ತಿದ್ದಾರೆ. ಮಹೇಶ್ ಬಾಬು ಜೊತೆ ಎರಡನೇ ಹೀರೋಯಿನ್ ಆಗಿ ನಟಿಸಲು ಆಫರ್ ಬಂದಿದೆ ಎಂಬ ಗಾಸಿಪ್ ಕೇಳಿ ಬಂದಿತ್ತು. ಈ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿಲ್ಲ.