• January 22, 2022

ಆಕಾಶದೀಪದ ಮಂಜರಿ ಪಾತ್ರಕ್ಕೆ ವಿದಾಯ ಹೇಳಿದ ಶೈನಿ

ಆಕಾಶದೀಪದ ಮಂಜರಿ ಪಾತ್ರಕ್ಕೆ ವಿದಾಯ ಹೇಳಿದ ಶೈನಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಆಕಾಶದೀಪ ಧಾರಾವಾಹಿಯು ವಿಭಿನ್ನ ಕಥಾಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಇತ್ತೀಚೆಗಷ್ಟೇ ಯಶಸ್ವಿ ನೂರು ದಿನ ಪೂರೈಸಿರುವ ಆಕಾಶದೀಪ ಧಾರಾವಾಹಿಯಲ್ಲಿ ಮಂಜರಿ ಪಾತ್ರಧಾರಿಯಾಗಿ ನಟಿಸುತ್ತಿದ್ದ ಶೈನಿ ಪಿರೇರಾ ಇದೀಗ ಶಾಕಿಂಗ್ ಸುದ್ದಿ ನೀಡಿದ್ದಾರೆ. ಆಕಾಶದೀಪದಲ್ಲಿ ನಾಯಕಿ ದೀಪಾಳ ಮಲ ಸಹೋದರಿ ಮಂಜರಿ ಪಾತ್ರ ನಿರ್ವಹಿಸುತ್ತಿದ್ದ ಶೈನಿ ಇದೀಗ ವೈಯಕ್ತಿಕ ಕಾರಣಗಳಿಂದಾಗಿ ಪ್ರಸ್ತುತ ಪಾತ್ರಕ್ಕೆ ವಿದಾಯ ಹೇಳಿದ್ದಾರೆ.

ಖಳನಾಯಕಿಯಾಗಿ ಮಂಜರಿಯಾಗಿ ನಟಿಸಿ ಸೈ ಎನಿಸಿಕೊಂಡಿರುವ ಶೈನಿ ತಾವು ಧಾರಾವಾಹಿಯನ್ನು ತೊರೆಯುತ್ತಿರುವುದರ ಬಗ್ಗೆ ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. “ನಾನು ಯಾವಾಗಲೂ ಪ್ರೀತಿಸುವ ಪಾತ್ರಕ್ಕೆ ವಿದಾಯ ಹೇಳುತ್ತಿದ್ದೇನೆ. ನಾನು ತುಂಬಾ ಎಂಜಾಯ್ ಮಾಡುತ್ತಿದ್ದ ಪಾತ್ರಗಳಲ್ಲಿ ಇದು ಒಂದು. ತುಂಬಾ ಕಲಿತಿದ್ದೇನೆ. ಹಾಗೂ ಕಲಿಯುವುದು ಬೇಕಾದಷ್ಟಿದೆ. ಕೇವಲ ಪಾತ್ರವನ್ನು ಮಾತ್ರವಲ್ಲದೇ, ಮನೆಯ ಭಾವನೆ ತಂದ ಕಲಾವಿದರನ್ನು ಮಿಸ್ ಮಾಡಿಕೊಳ್ಳುತ್ತೇನೆ. ಸೆಟ್ ನಲ್ಲಿ ನಾವು ಮಾಡಿದ ಜೋಕ್ ,ನಗು ಇನ್ನೂ ಮನಸ್ಸಿನಲ್ಲಿದೆ. ಇದು ಕೊನೆಗೊಂಡಿದ್ದಕ್ಕೆ ನನಗೆ ಬೇಸರವಾಗಿಲ್ಲ. ಇದು ಸಂಭವಿಸಿದ್ದಕ್ಕಾಗಿ ಸಂತೋಷವಿದೆ. ಹೊಸ ಸಾಹಸಕ್ಕೆ ಹೌದು ಎನ್ನೋಣ” ಎಂದು ಬರೆದುಕೊಂಡಿದ್ದಾರೆ.

ರಿಯಾಲಿಟಿ ಶೋ ಮೂಲಕ ಕಿರುತೆರೆ ಜಗತ್ತಿಗೆ ಬಂದ ಶೈನಿ ಖಳನಾಯಕಿಯಾಗಿ ನಟನಾ ಜಗತ್ತಿಗೆ ಎಂಟ್ರಿ ಕೊಟ್ಟರು. ಮೂರುಗಂಟು ಧಾರಾವಾಹಿಯಲ್ಲಿ ಖಳನಾಯಕಿಯಾಗಿ ನಟಿಸಿದ್ದ ಈಕೆ ಆಕಾಶದೀಪದಲ್ಲಿಯೂ ಕಾಣಿಸಿಕೊಂಡಿದ್ದು ಖಳನಾಯಕಿಯಾಗಿಯೇ. ಇನ್ನು ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುಂದರಿ ಧಾರಾವಾಹಿಯಲ್ಲಿ ನಮೃತಾ ಆಗಿ ಅಭಿನಯಿಸುತ್ತಿರುವ ಶೈನಿ ಅದರಲ್ಲಿ ಪಾಸಿಟಿವ್ ಪಾತ್ರಕ್ಕೆ ಜೀವ ತುಂಬಿರುವುದು ವಿಶೇಷ.