• May 4, 2022

ಸಂಗೀತಾ ಶೃಂಗೇರಿ ನಟನಾ ಬದುಕಿಗೆ ಕಿರುತೆರೆಯೇ ಮುನ್ನುಡಿ

ಸಂಗೀತಾ ಶೃಂಗೇರಿ ನಟನಾ ಬದುಕಿಗೆ ಕಿರುತೆರೆಯೇ ಮುನ್ನುಡಿ

ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777 ಸಿನಿಮಾ ಶೀಘ್ರದಲ್ಲಿ ತೆರೆ ಕಾಣಲಿರುವ ವಿಚಾರ ಹೊಸತೇನಲ್ಲ. ಚಾರ್ಲಿ 777 ಸಿನಿಮಾದಲ್ಲಿ ನಾಯಕಿ ದೇವಿಕಾ ಪಾತ್ರಕ್ಕೆ ಜೀವ ತುಂಬಿರುವ ಸಂಗೀತಾ ಶೃಂಗೇರಿ ಬಣ್ಣದ ಪಯಣಕ್ಕೆ ಮುನ್ನುಡಿ ಬರೆದುದು ಕಿರುತೆರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪೌರಣಿಕ ಧಾರಾವಾಹಿ ಹರಹರ ಮಹಾದೇವ ಧಾರಾವಾಹಿಯಲ್ಲಿ ಸತಿಯಾಗಿ ಅಭಿನಯಿಸುವ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಸಂಗೀತಾ ಬಯಸಿದ್ದು ಒಂದು ಆಗಿದ್ದು ಒಂದು.

ತನ್ನ ತಂದೆ ಇಂಡಿಯನ್ ಏರ್ ಫೋರ್ಸ್ ನಲ್ಲಿ ಅಧಿಕಾರಿಯಾಗಿದ್ದ ಕಾರಣ ಸಂಗೀತಾ ಕೂಡಾ ಬಯಸಿದ್ದು ಅದನ್ನೇ. ತಾನು ದೊಡ್ಡವಳಾದ ಮೇಲೆ ಇಂಡಿಯನ್ ಏರ್ ಫೋರ್ಸ್ ನಲ್ಲಿ ಅಧಿಕಾರಿಯಾಗಬೇಕು ಎಂದ ಕನಸನ್ನು ಕೂಡಾ ಆಕೆ ಕಂಡಿದ್ದಳು. ಆದರೆ ಕಾಲೇಜು ಎಂಬುದು ಅವರ ಬದುಕಿನ ದಿಕ್ಕನೇ ಬದಲಾಯಿಸಿತು.

ಪದವಿ ವಿದ್ಯಾರ್ಥಿನಿಯಾಗಿದ್ದಾಗ ಮನಸ್ಸು ಮಾಡೆಲಿಂಗ್ ನತ್ತ ವಾಲಿತು. ಆಕಸ್ಮಿಕವಾಗಿ ಕೆಲವೊಂದು ಫ್ಯಾಷನ್ ಈವೆಂಟ್ ಗಳಲ್ಲಿ ಭಾಗವಹಿಸಿದ ಸಂಗೀತಾ ಮಾಡೆಲಿಂಗ್ ನ ಬಗ್ಗೆ ಮತ್ತಷ್ಟು ವಿಚಾರಗಳನ್ನು ತಿಳಿದುಕೊಂಡರು. ಒಂದಷ್ಟು ಸ್ಪರ್ಧೆಗಳಲ್ಲಿ ಕ್ಯಾಟ್ ವಾಕ್ ಮಾಡಿದ ಚೆಲುವೆ ಪ್ರಶಸ್ತಿ ಗಿಟ್ಟಿಸಿದ್ದು ಈಕೆಯ ಪರಿಶ್ರಮ, ಸಾಧನೆಗೆ ಸಂದ ಪ್ರತಿಫಲ.

ಮಾಡೆಲಿಂಗ್ ಲೋಕದಲ್ಲಿ ಮಿಂಚಿದ ಸಂಗೀತಾ ನಟಿಯಾಗಿ ಭಡ್ತಿ ಪಡೆದುದು ಕಿರುಚಿತ್ರದ ಮೂಲಕ. ಕರ್ಮ ಎನ್ನುವ ಕಿರುಚಿತ್ರದಲ್ಲಿ ಅಭಿನಯಿಸಿದ್ದ ಈಕೆ ಮುಂದೆ ಸತಿಯಾಗಿ ಸೀರಿಯಲ್ ಲೋಕಕ್ಕೆ ಕಾಲಿಟ್ಟರು. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸಿದ್ದ ಈಕೆ ವೀಕ್ಷಕರ ಮನೆ ಮನದಲ್ಲಿ ಸ್ಥಾನವನ್ನು ಕೂಡಾ ಗಿಟ್ಟಿಸಿಕೊಂಡರು.

“ಪೌರಾಣಿಕ ಧಾರಾವಾಹಿ ಮೂಲಕ ನನ್ನ ಕಿರುತೆರೆ ಪಯಣ ಶುರುವಾಯಿತು. ಇದು ನಿಜಕ್ಕೂ ಅತ್ಯಂತ ಸವಾಲಿನ ಕ್ಷಣ. ಪೌರಾಣಿಕ ಪಾತ್ರದಲ್ಲಿ ನಟಿಸುವಾಗ ಭಾಷೆಯ ಮೇಲೆ ಹಿಡಿತ ಇರಬೇಕಾದುದು ಮುಖ್ಯ. ಅದಕ್ಕೆ ಅಧ್ಯಯನವೂ ಅಗತ್ಯ. ಆಳವಾದ ಅಧ್ಯಯನ ಇದ್ದರಷ್ಟೇ ಸುಲಲಿತವಾಗಿ ಪೌರಾಣಿಕ ಪಾತ್ರದಲ್ಲಿ ಅಭಿನಯಿಸಬಹುದು” ಎಂದು ಈ ಹಿಂದೆ ಧಾರಾವಾಹಿಯ ಬಗ್ಗೆ ಹೇಳಿದ್ದಾರೆ ಸಂಗೀತಾ.

ಮುಂದೆ ತೆಲುಗು ಧಾರಾವಾಹಿಯಲ್ಲಿ ನಟಿಸಿದ್ದ ಸಂಗೀತಾ ಬೆಳ್ಳಿತೆರೆಗೂ ಕಾಲಿಟ್ಟಾಗಿದೆ. ಎ+ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಸಂಗೀತಾ ಮುಂದೆ ಸಾಲಗಾರರ ಸಹಕಾರ ಸಂಘ, ಮಾರಿಗೋಲ್ಡ್, ಚಾರ್ಲಿ 777, ಪಂಪ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ಪಡೆದುಕೊಳ್ಳುತ್ತಿರುವ ಸಂಗೀತಾ ಮತ್ತೊಮ್ಮೆ ಕಿರುತೆರೆಗೆ ಮರಳುತ್ತಾರಾ ಕಾದು ನೋಡಬೇಕಾಗಿದೆ.