- May 12, 2022
‘777 ಚಾರ್ಲಿ’ ಬಗ್ಗೆ ಮೋಹಕ ತಾರೆ ಹೇಳಿದ್ದೇನು?


ಸ್ಯಾಂಡಲ್ವುಡ್ ಕ್ವೀನ್ ಎಂದೇ ಕನ್ನಡಿಗರ ಮನದಲ್ಲಿ ರಾರಾಜಿಸುತ್ತಿರುವ ಮೋಹಕ ತಾರೆ ರಮ್ಯ ಅವರು ಒಂದಷ್ಟು ಕಾಲ ಸಿನಿರಂಗದಿಂದ ಹೊರಗುಳಿದಿದ್ದವರು. ಇದೀಗ ಎಲ್ಲೆಡೆ ಸಕ್ರೀಯರಾಗಿರುವ ಅವರು ಕನ್ನಡ ಚಿತ್ರಗಳನ್ನ, ಚಿತ್ರ ಸಂಬಂಧಿ ವಿಷಯಗಳನ್ನ ಬೆಂಬಲಿಸುತ್ತಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಹಾಗು ಸಿನಿಮಾಗಾಳ ಬಗೆಗಿನ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿರುವ ನಟಿ, ಇದೀಗ ರಕ್ಷಿತ್ ಶೆಟ್ಟಿಯವರ ಮುಂದಿನ ಚಿತ್ರ ‘777 ಚಾರ್ಲಿ’ ಬಗ್ಗೆ ಮಾತನಾಡಿದ್ದಾರೆ.




ತಮ್ಮ ಟ್ವಿಟರ್ ಖಾತೆಯ ಮೂಲಕ ವಿವಿಧ ಚಿತ್ರಗಳ ಬಗೆಗೆ ಮಾತನಾಡುವ ರಮ್ಯಾ, ಈ ಹಿಂದೆ ಕೆಜಿಎಫ್ ಚಾಪ್ಟರ್ 2 ಮೊದಲಾಗಿ ಮುಂತಾದ ಚಿತ್ರಗಳ ಯಶಸ್ಸಿನ ಬಗ್ಗೆಯೂ ಶುಭ ಹಾರೈಸಿದ್ದರು. ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ನಟಿ ಇದೀಗ ಚಲನಚಿತ್ರಗಳ ಬಗೆಗೂ ಆಸಕ್ತಿಯನ್ನ ಮರಳಿಸಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಅವರ ನಟನೆಯ ಬಹುನಿರೀಕ್ಷಿತ ಪಾನ್-ಇಂಡಿಯನ್ ಚಿತ್ರ ‘777 ಚಾರ್ಲಿ’ಯ ಟ್ರೈಲರ್ ಇದೇ ಮೇ 16ರಂದು ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ. ಈ ಬಗ್ಗೆ ಹಂಚಿಕೊಂಡು ಟ್ವೀಟ್ ಮಾಡಿದ್ದ ನಟ ರಕ್ಷಿತ್ ಶೆಟ್ಟಿಯವರ ಟ್ವೀಟ್ ಅನ್ನು ಮರುಟ್ವೀಟ್ ಮಾಡಿ “ಈ ಚಿತ್ರಕ್ಕಾಗಿ ನಾನು ಕೂಡ ಎದುರುಗಾಣುತ್ತಿದ್ದೇನೆ ರಕ್ಷಿತ್” ಎಂದಿದ್ದಾರೆ ರಮ್ಯಾ. ಇದು ‘777 ಚಾರ್ಲಿ’ ಬಗೆಗಿನ ಕ್ರೇಜ್ ಹಾಗು ರಮ್ಯಾ ಅವರ ಸಿನಿ ಆಸಕ್ತಿಯ ಬಗೆಗೆ ಹೇಳುತ್ತಿದೆ. ಕಿರಣ್ ರಾಜ್ ಕೆ ಅವರ ನಿರ್ದೇಶನದ ಈ ‘777 ಚಾರ್ಲಿ’ ಚಿತ್ರ ಜೂನ್ 10ಕ್ಕೆ ಪಂಚಭಾಷೆಗಳಲ್ಲೂ ಬಿಡುಗಡೆಗೊಳ್ಳಲಿದ್ದು, ಚಿತ್ರದ ಟ್ರೈಲರ್ ಇದೇ ಮೇ 16ಕ್ಕೆ ಬಿಡುಗಡೆಗೊಳ್ಳಲಿದೆ.




ಮತ್ತೆ ಸಿನಿರಂಗಕ್ಕಿಳಿಯುತ್ತಾರ ‘ಮೋಹಕ ತಾರೆ’??
ಸದ್ಯ ರಾಜಕೀಯದಲ್ಲಿ ಸಕ್ರೀಯರಾಗಿರುವ ರಮ್ಯ ಎಂದೆಂದಿಗೂ ಮಾಸದ ದೊಡ್ಡ ಅಭಿಮಾನಿ ಬಳಗವನ್ನ ಹೊಂದಿರೋ ನಟಿ. ರಮ್ಯಾ ಅವರು ಸಿನಿರಂಗಕ್ಕೆ ಮರಳಿ ಬರುತ್ತಾರ ಎಂಬ ಪ್ರಶ್ನೆ ಅದೆಷ್ಟೋ ಅಭಿಮಾನಿಗಳಲ್ಲಿದೆ. ಈ ಹಿಂದೆ ಪುನೀತ್ ರಾಜಕುಮಾರ್ ಅವರ ಮುಂದಿನ ಚಿತ್ರದಿಂದ ರಮ್ಯಾ ಮರಳಿ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಅಪ್ಪು ನಮ್ಮನ್ನ ಅರ್ಧಕ್ಕೆ ಅಗಲಿದರು. ಆದ್ದರಿಂದ ರಮ್ಯಾ ಎಂದು ಸಿನಿಮಾಗಳೆಡೆಗೆ ಮರಳಲಿದ್ದಾರೆ ಎಂಬ ಪ್ರಶ್ನೆಗೆ ಸದ್ಯಕ್ಕೆ ಯಾವುದೇ ಉತ್ತರ ಸಿಕ್ಕಿಲ್ಲ. ಸದ್ಯ ರಮ್ಯಾ ಅವರು ಕನ್ನಡ ಸಿನಿಮಾಗಳೆಡೆಗೆ ತೋರುತ್ತಿರೋ ಕಾಳಜಿ ಅಭಿಮಾನಿಗಳಲ್ಲಿ ಸಂತಸ ತಂದಿದೆ.






