• May 3, 2022

ಕೋಸ್ಟಲ್ ವುಡ್ ನಿಂದ ಸ್ಯಾಂಡಲ್ ವುಡ್ ಗೆ ರಚನಾ ಪಯಣ

ಕೋಸ್ಟಲ್ ವುಡ್ ನಿಂದ ಸ್ಯಾಂಡಲ್ ವುಡ್ ಗೆ ರಚನಾ ಪಯಣ

ತುಳು ಸಿನಿಮಾಗಳ ಮೂಲಕ ನಟನಾ ಕೆರಿಯರ್ ಆರಂಭಿಸಿದ ನಟಿ ರಚನಾ ರೈ ಈಗ ವಾಮನ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಧನವೀರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ರಚನಾ ಮೊದಲ ಹಂತದ ಶೂಟಿಂಗ್ ನಲ್ಲಿ ಭಾಗವಹಿಸಿದ್ದಾರೆ. ಶಂಕರ್ ರಮಣ್ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ.

ಸಿನಿಮಾದ ಬಗ್ಗೆ ಮಾತನಾಡಿರುವ ರಚನಾ “ನನ್ನ ಮೊದಲ ಸಿನಿಮಾದಲ್ಲಿ ಇಂತಹ ಒಳ್ಳೆಯ ತಂಡದ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗಿದೆ. ಫೈವ್ ಸ್ಟಾರ್ ಹೋಟೆಲ್ ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುವ ಕಸ್ಟಮ್ ಆಫೀಸರ್ ಮಗಳು ಪಾತ್ರ ಮಾಡುತ್ತಿದ್ದೇನೆ. ಅವಳು ಹುಡುಗನೊಂದಿಗೆ ಪ್ರೀತಿಯಲ್ಲಿ ಬೀಳುತ್ತಾಳೆ. ತನ್ನ ಲವ್ ಗಾಗಿ ಹೇಗೆ ಹೋರಾಟ ಮಾಡುತ್ತಾಳೆ ಎಂಬುದಾಗಿದೆ. ಇಲ್ಲಿ ನನ್ನ ನಟನಾ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಇದೆ. ಇದೇ ನಾನು ಸಿನಿಮಾ ಒಪ್ಪಿಕೊಳ್ಳಲು ಕಾರಣವಾಗಿದೆ” ಎಂದು ಹೇಳಿದ್ದಾರೆ.

ರಚನಾ ನಟಿಯಲ್ಲದೇ ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ ಹಾಗೂ ಲೇಖಕಿಯೂ ಹೌದು. “ನಾನು ನಟನೆಯನ್ನು ಪ್ರೀತಿಸುತ್ತೇನೆ ಎಂದು ಅರಿತುಕೊಂಡೆ. ವೇದಿಕೆಗಳಲ್ಲಿ ಶೋಗಳನ್ನು ಕೊಟ್ಟಿದ್ದೇನೆ. ಇದು ನನಗೆ ಇಲ್ಲಿ ಉತ್ತಮ ಭವಿಷ್ಯ ಇದೆ ಎಂಬ ಆತ್ಮವಿಶ್ವಾಸ ನೀಡಿತು” ಎಂದು ಹೇಳುವ ರಚನಾ ಕಿರುತೆರೆ ನಟ ಕಿರಣ್ ರಾಜ್ ಅವರೊಂದಿಗೆ ಚಿಕನ್ ಪುಳಿಯೋಗರೆ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.