- April 2, 2022
ಮದುವೆಯ ದಿನ ವಿಶೇಷ ಕೆಲಸ ಮಾಡಲು ನಿರ್ಧರಿಸಿರುವ ನಟಿ…ಆ ಕೆಲಸ ಏನು ಗೊತ್ತಾ…


ನಟಿ ಹಾಗೂ ಲೈಫ್ ಸ್ಟೈಲ್ ಕೋಚ್ ಆಗಿರುವ ಕಾವ್ಯಾ ಶಾ ಇದೇ ಏಪ್ರಿಲ್ 18ರಂದು ನಿರ್ಮಾಪಕ ವರುಣ್ ಕುಮಾರ್ ಗೌಡ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕುಟುಂಬಸ್ಥರು , ಸ್ನೇಹಿತರು ಹಾಗೂ ಇಂಡಸ್ಟ್ರಿಯ ಮಂದಿ ಈ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.


“ವರುಣ್ ನನಗೆ 11 ವರ್ಷಗಳಿಂದ ಪರಿಚಯ. ನಾನು ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದು ಬ್ಯೂಟಿ ಪೆಜೆಂಟ್ ಸ್ಪರ್ಧೆಯಲ್ಲಿ. ನಾನು ಸ್ಪರ್ಧಿಯಾಗಿ ಭಾಗವಹಿಸಿದ್ದರೆ ಅವರು ಆಯೋಜನೆಯ ತಂಡದಲ್ಲಿದ್ದರು. ಮೊದಲು ಸ್ನೇಹಿತರಾಗಿದ್ದ ನಾವು ನಂತರ ಪರಸ್ಪರ ಇಷ್ಟ ಪಡಲು ಆರಂಭಿಸಿದೆವು. ಹೆತ್ತವರ ಒಪ್ಪಿಗೆ ಪಡೆದು ನಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದೆವು” ಎನ್ನುತ್ತಾರೆ ಕಾವ್ಯ ಶಾ.


“ವರುಣ್ ತುಂಬಾ ಕಾಳಜಿ ಹೊಂದಿರುವ ವ್ಯಕ್ತಿ. ಈಗಾಗಲೇ ಹಲವಾರು ಟಿವಿ ಶೋಗಳನ್ನು ನಿರ್ಮಿಸಿರುವ ವರುಣ್ ಈಗ ಮೂವಿ ಪ್ರೊಡಕ್ಷನ್ ಆರಂಭಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಅವರಿಗೂ ವರುಣ್ ತುಂಬಾ ಆತ್ಮೀಯರಾಗಿದ್ದು ಕನ್ನಡದ ಕೋಟ್ಯಧಿಪತಿ ಶೋ ನಲ್ಲಿ ಅವರೊಂದಿಗೆ ಕೆಲಸ ಮಾಡಿದ್ದಾರೆ” ಎಂದು ಭಾವಿ ಪತಿಯ ಬಗ್ಗೆ ಹೇಳುತ್ತಾರೆ.


ಇದರ ಜೊತೆಗೆ “ಅಪ್ಪು ಸರ್ ಅವರಿಗೆ ನಮ್ಮ ಸಂಬಂಧದ ಕುರಿತು ತಿಳಿದಿತ್ತು. ಯಾವಾಗ ಮದುವೆ ಆಗುತ್ತೀರಿ ಎಂದು ಕೇಳುತ್ತಿದ್ದರು. ಈಗ ನಮ್ಮ ಮದುವೆಯ ಸಂದರ್ಭದಲ್ಲಿ ಅವರಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ. ನಾವು ಅಶ್ವಿನಿ ಮೇಡಂ ಹಾಗೂ ಶಿವರಾಜ್ ಕುಮಾರ್ ಅವರು ಬರುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ” ಎಂದಿದ್ದಾರೆ.


ಪುನೀತ್ ರಾಜ್ ಕುಮಾರ್ ಅವರ ನೆನಪಿನಲ್ಲಿ ಕಾಡಿನ ಥೀಮ್ ಇಟ್ಟುಕೊಂಡು ಮದುವೆ ಆಗುವ ಪ್ಲಾನ್ ಮಾಡಿಕೊಂಡಿದ್ದಾರೆ. “ಇದು ಪುನೀತ್ ರಾಜ್ ಕುಮಾರ್ ಅವರನ್ನು ನೆನಪಿಸಿಕೊಳ್ಳುವ ಹಾದಿಯಾಗಿದೆ. ಬೇಸಿಗೆ ಆಗಿರುವುದರಿಂದ ನಾವು ಹಸಿರು ಥೀಮ್ ಬಯಸಿದ್ದೇವೆ. ಇದು ಈ ಸೀಸನ್ ನಲ್ಲಿ ತಂಪು ಕಾಣುತ್ತದೆ” ಎಂದಿದ್ದಾರೆ.


ಮದುವೆಗೆ ಬರುವ ಅತಿಥಿಗಳು ತಮ್ಮ ಅಂಗಾಂಗ ದಾನ ಮಾಡಲು ಅವಕಾಶ ಇರುತ್ತದೆ. “ಪುನೀತ್ ರಾಜ್ ಕುಮಾರ್ ಅವರಿಂದ ಸ್ಫೂರ್ತಿ ಪಡೆದು, ತಮ್ಮ ಕಣ್ಣುಗಳನ್ನು ಹಾಗೂ ಅಂಗಗಳನ್ನು ದಾನ ಮಾಡಲು ನೋಂದಾವಣೆ ಮಾಡಲು ಬಯಸುವವರಿಗೆ ಫಾರ್ಮ್ ಗಳೊಂದಿಗೆ ಗೊತ್ತು ಪಡಿಸಿದ ಜಾಗ ಇರುತ್ತದೆ” ಎಂದಿದ್ದಾರೆ.








