• July 14, 2022

ಸದ್ಯಕ್ಕೆ ಸಿನಿಮಾದಂತೆ ನನ್ನ ಜೀವನ – ನಿತ್ಯಾ ಮೆನನ್

ಸದ್ಯಕ್ಕೆ ಸಿನಿಮಾದಂತೆ ನನ್ನ ಜೀವನ – ನಿತ್ಯಾ ಮೆನನ್

ಬಹುಭಾಷಾ ನಟಿ ನಿತ್ಯಾ ಮೆನನ್ ಸಾಧಾರಣ ಎಲ್ಲರಿಗೂ ಚಿರಪರಿಚಿತ ಹಾಗೂ ಎಲ್ಲರ ನೆಚ್ಚಿನ ನಟಿಯೂ ಹೌದು. ಇವರು ಸಿನಿಮಾ ಮಾತ್ರವಲ್ಲದೆ ಹಲವು ವೆಬ್ ಸರಣಿಗಳಲ್ಲೂ ನಟಿಸುತ್ತಿದ್ದಾರೆ. ಇತ್ತೀಚೆಗೆ ಮಾಡರ್ನ್ ಲವ್ ಎಂಬ ವೆಬ್ ಸಿರೀಸ್ ನಲ್ಲಿ ನಿತ್ಯಾ ಮೆನನ್ ಕಾಣಿಸಿಕೊಂಡಿದ್ದಾರೆ.

ನಿತ್ಯಾ ಮೆನನ್ ತೆಲುಗು, ತಮಿಳು, ಕನ್ನಡ, ಮಲಯಾಳಂ ಸೇರಿದಂತೆ ಅನೇಕ ಭಾಷೆಗಳಲ್ಲಿ ನಟಿಸುವ ಮೂಲಕ ಭಾರತದ ಬಹುಭಾಷಾ ನಟಿಯರಲ್ಲಿ ಒಬ್ಬರಾಗಿದ್ದಾರೆ. ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ತನಗೊಂದು ವಿಶೇಷ ಇಮೇಜ್ ಕ್ರಿಯೇಟ್ ಮಾಡಿಕೊಂಡಿರುವ ಈ ನಟಿ ಸದ್ಯ ಸಿನಿಮಾಗಳಿಗಿಂತ ವೆಬ್ ಸರಣಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಂದಹಾಗೆ ಮಾಡರ್ನ್ ಲವ್ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ನಿತ್ಯಾ ಮೆನನ್ ಕಾಲಿಗೆ ಪೆಟ್ಟು ಬಿದ್ದಿರುವುದನ್ನು ಗಮನಿಸಲಾಗಿದೆ. ಕೋಲು ಹಿಡಿದುಕೊಂಡು ಇಬ್ಬರ ಸಹಾಯದಿಂದ ವೇದಿಕೆ ಏರಿದ ಈ ಇವರನ್ನು ನೋಡಿ ಎಲ್ಲರೂ ಒಮ್ಮೆ ಇದೆಲ್ಲಾ ಪ್ರಚಾರದ ಭಾಗವೇ ಇರಬೇಕು ಎಂದುಕೊಂಡರು. ಆದರೆ, ನಿತ್ಯಾ ಮೆನನ್​ ಅವರ ಕಾಲಿಗೆ ನಿಜವಾಗಿಯೂ ಗಾಯವಾಗಿತ್ತು.

ಈ ಹಿನ್ನಲೆಯಲ್ಲಿ ನಿತ್ಯಾ ಮೆನನ್ ಇತ್ತೀಚಿಗೆ ಗಾಯಗೊಂಡ ಕಾಲಿಗೆ ಬ್ಯಾಂಡೇಜ್ ಹಾಕಿರುವ ಫೋಟೋವನ್ನು ಶೇರ್ ಮಾಡುವ ಮೂಲಕ ಭಾವನಾತ್ಮಕ ಪೋಸ್ಟ್ ಮಾಡಿದ್ದು, ‘ಸದ್ಯ ನನ್ನ ಜೀವನ ಸಿನಿಮಾದಲ್ಲಿ ಇದ್ದಂತೆ‘ ಎಂದು ಬರೆದುಕೊಂಡಿದ್ದಾರೆ.

ಅಮೇರಿಕನ್ ಮಾಡರ್ನ್ ಲವ್ ಅನ್ನು ನಮ್ಮ ಯೋಚನೆಗೆ ತಕ್ಕಂತೆ ಮಾರ್ಪಡಿಸಿ ಹೈದರಾಬಾದ್ ಮಾಡರ್ನ್ ಲವ್ ಎಂಬ ವೆಬ್ ಸಿರೀಸ್ ಆರಂಭಿಸಲಾಗಿದೆ. ಏಳು ಕಥೆಗಳನ್ನು ಹೊಂದಿರುವ ಈ ವೆಬ್ ಸೀರೀಸ್ ನ ಒಂದು ಕಥೆಯಲ್ಲಿ ನಿತ್ಯಾ ಮೆನನ್ ಮತ್ತು ರೇವತಿ ಕಾಣಿಸಿಕೊಳ್ಳಲಿದ್ದಾರೆ.

”ಈ ಸಿನಿಮಾದಲ್ಲಿ ಆದಂತೆಯೇ ನನ್ನ ಕಾಲಿಗೂ ಗಾಯವಾಗಿದ್ದು, ಈಗ ನನ್ನ ಸ್ಥಿತಿಯೂ ಅದೇ ಆಗಿದೆ” ಎಂದು ನಿತ್ಯಾ ಮೆನನ್ ಹೇಳಿದ್ದಾರೆ. ಸದ್ಯ ನಾನು ಮನೆಯಲ್ಲಿಯೇ ಇದ್ದು, ತಾಯಿ ನನ್ನ ಇಷ್ಟದ ಖಾದ್ಯಗಳನ್ನು ಮಾಡಿಕೊಡುತ್ತಾಳೆ” ಎಂದಿದ್ದಾರೆ.

ಸ್ಯಾಂಡಲ್ವುಡ್ನ ಮೈನಾ, ಜೋಶ್, ಕೋಟಿಗೊಬ್ಬ 2, ಐದೊಂದ್ಲ ಐದು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿರುವ ನಿತ್ಯಾ ಮೆನನ್ ಭಾರತದ ಬಹುಭಾಷಾ ನಟಿಯರಲ್ಲಿ ಒಬ್ಬರು.