• June 9, 2022

ಮಾಡೆಲ್ ನಿಂದ ನಟನೆಯವರೆಗೆ ಕೃಷ್ಣಾ ಪಯಣ

ಮಾಡೆಲ್ ನಿಂದ ನಟನೆಯವರೆಗೆ ಕೃಷ್ಣಾ ಪಯಣ

ಕಲಾವಿದರ ಕುಟುಂಬದ ಕುಡಿಯಾಗಿರುವ ಕೃಷ್ಣಾ ಭಟ್ ಇಂದು ಬಣ್ಣದ ಜಗತ್ತಿನಲ್ಲಿ ಬದುಕು ರೂಪಿಸಿಕೊಂಡಿದ್ದಾರೆ ಎಂದರೆ ಅದಕ್ಕೆ ನಟನೆಯ ಮೇಲೆ ಅವರಿಗಿರುವ ಒಲವು ಹಾಗೂ ಸತತ ಪರಿಶ್ರಮವೇ ಮುಖ್ಯ ಕಾರಣ. ಸವರ್ಣ ದೀರ್ಘ ಸಂಧಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬೆಳ್ಳಿತೆರೆಗೆ ಪರಿಚಿತರಾದ ಕೃಷ್ಣಾ ಭಟ್ ಇತ್ತೀಚೆಗೆ ಬಿಡುಗಡೆಯಾಗಿರುವ ತೆಲುಗಿನ ಸರ್ಕಾರಿ ವಾರಿ ಪಾಟು ಸಿನಿಮಾದಲ್ಲಿ ಪೋಷಕ ಪಾತ್ರದ ಮೂಲಕ ಮೋಡಿ ಮಾಡಿದ್ದಾರೆ.

ಕನ್ನಡದ ಜೊತೆಗೆ ಪರಭಾಷೆಯ ಸಿನಿರಂಗದಲ್ಲಿಯೂ ನಟನಾ ಕಂಪನ್ನು ಪಸರಿಸುತ್ತಿರುವ ಕೃಷ್ಣಾ ಭಟ್ ಪ್ರಾಯಶಃ ಎನ್ನುವ ಕನ್ನಡ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಹಿರಿತೆರೆಯ ಜನಪ್ರಿಯ ನಟಿಯಾಗಿ ಇಂದು ಕಿರುತೆರೆಯಲ್ಲಿ ಅರಸನಕೋಟೆಯ ಅಖಿಲಾಂಡೇಶ್ವರಿಯಾಗಿ ಮಿಂಚುತ್ತಿರುವ ವಿನಯಾ ಪ್ರಸಾದ್ ಅವರ ಮುದ್ದಿನ ಸೊಸೆಯಾಗಿರುವ ಕೃಷ್ಣಾ ಭಟ್ ಕಿರುತೆರೆತ ಸಕ್ರಿಯ ನಟ ರವಿ ಭಟ್ ಅವರ ಮಗಳು.

ಅಪ್ಪ ಹಾಗೂ ಅತ್ತೆ ಇಬ್ಬರೂ ನಟನೆಯಲ್ಲಿ ಗುರುತಿಸಿಕೊಂಡಿದ್ದರೂ ಕೃಷ್ಣಾ ಅವರು ನಟಿಯಾಗಿದ್ದು ಆಕಸ್ಮಿಕ. ಯಾವತ್ತಿಗೂ ಕೂಡಾ ತಾನು ನಟಿಯಾಗಬೇಕು ಎಂಬ ಕನಸು ಕಂಡವರಲ್ಲ ಕೃಷ್ಣಾ. ಬದಲಿಗೆ ಕ್ರೀಡೆಯತ್ತ ವಿಶೇಷ ಆಸಕ್ತಿ ಹೊಂದಿದ್ದ ಆಕೆ ಶಾಲಾ ಕಾಲೇಜು ದಿನಗಳಲ್ಲಿ ಬಾಸ್ಕೆಟ್ ಬಾಲ್ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದರು.

ಕಾಲೇಜು ವಿದ್ಯಾರ್ಥಿನಿಯಾಗಿದ್ದ ಕೃಷ್ಣಾ ಮುಂದೆ ಅತ್ತೆ ವಿನಯಾ ಪ್ರಸಾದ್ ಅವರ ಒತ್ತಾಯದ ಮೇರೆಗೆ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಓದಿನ ಜೊತೆಗೆ ಮಾಡೆಲಿಂಗ್ ಅನ್ನು ಬ್ಯಾಲೆನ್ಸ್ ಮಾಡಿಕೊಂಡು ಸಾಗುತ್ತಿದ್ದರು.

“ಫೆಮಿನಾ ಸ್ಟೈಲ್ ದೀವಾ”ಗೆ ಆಡಿಷನ್ ಕೊಟ್ಟ ಕೃಷ್ಣಾ ಭಟ್ ಫೈನಲ್ ರೌಂಡ್‌ನಲ್ಲೂ ಗೆದ್ದು, ಟ್ರೋಫಿತಯನ್ನು ಪಡೆದುಕೊಂಡರು. ಇದರ ಜೊತೆಗೆ ಫೆಮಿನಾ ಕವರ್‌ಪೇಜ್‌ನಲ್ಲೂ ಇವರ ಫೋಟೋ ಬಂದುದು ಇವರ ಪರಿಶ್ರಮಕ್ಕೆ ಉದಾಹರಣೆ. ಮುಂದೆ ಅನೇಕ ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಈಕೆ ಮಿಂಚಿದರು.

ಯಾವಾಗ ಮಾಡೆಲ್ ಆಗಿ ಕೃಷ್ಣಾ ಗುರುತಿಸಿಕೊಂಡರೋ ಆಗ ಸಹಜವಾಗಿ ನಟಿಸುವ ಅವಕಾಶಗಳು ಕೂಡಾ ಆಕೆಯನ್ಬು ಅರಸಿ ಬಂದವು. ಹಾಗೇ ಬಂದ ಅವಕಾಶಗಳನ್ನು ಕಂಡ ಕೃಷ್ಣಾ ನಟಿಯಾಗುವ ನಿರ್ಧಾರ ಮಾಡಿದರು. ಉಷಾ ಭಂಡಾರಿಯವರ ನಟನಾ ತರಬೇತಿ ಸೇರಿದ ಆಕೆ ನಟನೆಯ ರೀತಿ ನೀತಿ ತಿಳಿದುಕೊಂಡರು.
ಇದೀಗ ನಟನೆಯಲ್ಲಿ ಬ್ಯುಸಿಯಾಗಿರುವ ಕೃಷ್ಣಾ ನಿಜವಾದ ಹೆಸರು ಭಾವನಾ ಭಟ್.

ಮೂಲತಃ ಭಾವನಾ ಭಟ್ ಆಗಿದ್ದ ಈಕೆ ಇಂದು ಕೃಷ್ಣಾ ಭಟ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ಮೂಲ ಕಾರಣ ಆಕೆಯ ಅಜ್ಜ. ಕೃಷ್ಣ ಭಟ್ ಆಕೆಯ ಅಜ್ಜನ ಹೆಸರು. ತುಂಬಾ ಪ್ರೀತಿಸುತ್ತಿದ್ದ ಅಜ್ಜ ಇನ್ನಿಲ್ಲ ಎಂದು ಅರಿತುಕೊಂಡಾಗ ನೊಂದುಕೊಂಡ ಭಾವನಾ ಭಟ್ ಅಜ್ಜನ ಹೆಸರನ್ನೇ ತನಗೆ ಇಟ್ಟುಕೊಂಡರು. ಇದೀಗ ಕೃಷ್ಣಾ ಆಗಿರುವ ಈಕೆ ಸಿನಿರಂಗದಲ್ಲಿ ಇನ್ನಷ್ಟು ಬೆಳೆಯಲಿ ಎಂಬುದೇ ನಮ್ಮ ಹಾರೈಕೆ.