• April 18, 2022

ಕಾಜಲ್ ಖುಷಿಯ ಮಾತುಗಳು

ಕಾಜಲ್ ಖುಷಿಯ ಮಾತುಗಳು

ಸೌತ್ ಇಂಡಿಯಾದ ಖ್ಯಾತ ನಟಿ ಕಾಜಲ್ ಅಗರವಾಲ್ ಈಗ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಮುಂದಿನ ತಿಂಗಳಿನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ತಮ್ಮ ಪ್ರೆಗ್ನೆನ್ಸಿ ಕುರಿತು ತಾವು ಎದುರಿ‌ಸಿದ ಕಷ್ಟ , ಸುಖಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕಾಜಲ್ ಅವರಿಗೆ ಪ್ರಗ್ನೆನ್ಸಿಯ ಸಮಯದಲ್ಲಿ ನಿದ್ರಾಹೀನತೆ ಕಾಡಿತ್ತು. “ಪ್ರತಿದಿನ ರಾತ್ರಿ 2 ಗಂಟೆಗೆ ಎಚ್ಚರವಾಗುತ್ತಿತ್ತು. ಆ ಬಳಿಕ ನಿದ್ದೆ ಬರುತ್ತಿರಲಿಲ್ಲ. ಈ ಸಮಯದಲ್ಲಿ ಮೊಬೈಲ್ ನೋಡುತ್ತಿದ್ದೆ. ನಾನು ಮಾಡಬೇಕಾದ ಕೆಲಸಗಳ ಬಗ್ಗೆ ಪಟ್ಟಿ ಮಾಡುತ್ತಿದ್ದೆ. ನ್ಯಾಪಿಗಳನ್ನು ಒಗೆಯಲು ಬೇಕಾದ ಡಿಜರ್ಜೆಂಟ್ ಗಳನ್ನು ಆನ್ ಲೈನ್ ನಲ್ಲಿ ಆರ್ಡರ್ ಮಾಡುತ್ತಿದ್ದೆ” ಎನ್ನುತ್ತಾರೆ ಕಾಜಲ್.

“ರಾತ್ರಿ ನಾನು ಎದ್ದಾಗಲೆಲ್ಲಾ ಅವರೂ ನನಗಾಗಿ ಎಚ್ಚರಗೊಳ್ಳುತ್ತಿದ್ದರು. ಮಾರ್ನಿಂಗ್ ಸಿಕ್ ನೆಸ್ ಕಾಡಿದಾಗಲು ನನ್ನನ್ನು ಉಪಚರಿಸುತ್ತಿದ್ದರು. ತಾಯಿಯ ನೆನಪಾದಾಗಲೆಲ್ಲ ಅವರ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ನನ್ನೆಲ್ಲಾ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಿದ್ದರು. ಉತ್ತಮ ಪತಿ ಮಾತ್ರವಲ್ಲ ಅವರು ಉತ್ತಮ ತಂದೆಯೂ ಆಗಬಲ್ಲರು” ಎಂದು ಪತಿ ಗೌತಮ್ ಕಿಚ್ಲು ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಈಗಾಗಲೇ ಕಾಜಲ್ ಅವರು ಹೊಸ ಮನೆಯಲ್ಲಿ ಮಗುವಿಗಾಗಿ ನರ್ಸರಿ ರೆಡಿ ಮಾಡುತ್ತಿದ್ದಾರೆ. ಇದರಲ್ಲಿ ಪ್ಲೇ ಹೌಸ್ ಹಾಗೂ ಟ್ರೀ ಏರಿಯಾ ಇರಲಿದೆ. ಮಗುವಿಗಾಗಿ ಶಾಪಿಂಗ್ ಕೂಡಾ ಮಾಡಿದ್ದು ತೊಟ್ಟಿಲು , ತಳ್ಳುವ ಗಾಡಿ, ಡೈಪರ್, ಆರ್ಗಾನಿಕ್ ಉಡುಪುಗಳನ್ನು ಖರೀದಿಸಿದ್ದಾರೆ.

ಬಾಡಿ ಫಿಟ್ ನೆಸ್ ಗೆ ಮಹತ್ವ ನೀಡಬೇಕೆಂದಿರುವ ಕಾಜಲ್ ಆರೋಗ್ಯಕರ ಆಹಾರವನ್ನು ಸೇವಿಸುತ್ತಿದ್ದಾರೆ. “ಹೆರಿಗೆಯ ಬಳಿಕ ನ್ಯೂಟ್ರಿಷನ್ ನ್ನು ನೇಮಿಸಿಕೊಂಡು ಮೊದಲಿನಂತೆ ಆಗುತ್ತೇನೆ. ವರ್ಷದ ಕೊನೆಯಲ್ಲಿ ಶೂಟಿಂಗ್ ಹೋಗುವ ಯೋಜನೆ ಇದೆ. ಕೋಪ, ಅಂಜಿಕೆ, ಕಾತುರ ಎಲ್ಲಾ ಭಾವನೆಗಳೂ ನನ್ನಲ್ಲಿ ಮನೆ ಮಾಡಿವೆ. ಈ ಮೊದಲು ನಾನು ಸಿಟ್ಟಿನವಳಾಗಿದ್ದೆ. ಈ ಅವಧಿ ನನಗೆ ತಾಳ್ಮೆಯನ್ನು ಕಲಿಸಿದೆ” ಎಂದಿದ್ದಾರೆ ಕಾಜಲ್ ಅಗರವಾಲ್.

ತನಗೆ ಕುಟುಂಬದವರ ಸಹಕಾರ ಸಿಗುತ್ತಿದೆ. ಗರ್ಭಿಣಿಯರಿಗೆ ಆಯೋಜಿಸಲಾದ ಸಮಗ್ರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ. ತಾಯಿ ಕುರಿತಾದ ಸಿನಿಮಾ ಹಾಗೂ ಸಾಕ್ಷ್ಯ ಚಿತ್ರಗಳನ್ನು ನೋಡುತ್ತೇನೆ ಎಂದಿದ್ದಾರೆ ಕಾಜಲ್.