- April 13, 2022
ಕವನ ಪಾತ್ರಕ್ಕೆ ವಿದಾಯ ಹೇಳಿದ ಅನಿಕಾ ಹೇಳಿದ್ದೇನು ಗೊತ್ತಾ?


ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮರಳಿ ಮನಸ್ಸಾಗಿದೆ ಧಾರಾವಾಹಿಯಲ್ಲಿ ಕವನ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದ ಅನಿಕಾ ಸಿಂಧ್ಯಾ ಇದೀಗ ಪಾತ್ರಕ್ಕೆ ವಿದಾಯ ಹೇಳಿದ್ದಾರೆ. ಲಕ್ಷ್ಮಿ ಬಾರಮ್ಮ ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ಅನಿಕಾ ಸಿಂಧ್ಯಾ ಒಂದೂವರೆ ವರ್ಷದ ನಂತರ ಕವನ ಆಗಿ ನಟಿಸುವ ಮೂಲಕ ಮತ್ತೆ ನಟನೆಗೆ ಮರಳಿದ್ದರು. ಇದೀಗ ಕಾರಣಾಂತರಗಳಿಂದ ಕವನ ಪಾತ್ರದಿಂದ ಹೊರಬಂದಿದ್ದಾರೆ ಅನಿಕಾ.


ನೆಗೆಟಿವ್ ಪಾತ್ರಗಳ ಮೂಲಕ ಕಿರುತೆರೆ ಲೋಕದಲ್ಲಿ ತನ್ನದೇ ಆದ ಹೊಸ ಹವಾ ಸೃಷ್ಟಿ ಮಾಡಿದ್ದ ಅನಿಕಾ ಸಿಂಧ್ಯಾ ಮೊದಲ ಬಾರಿಗೆ ಪಾಸಿಟಿವ್ ಪಾತ್ರದ ಮೂಲಕ ಕಿರುತೆರೆಗೆ ಬಂದಿದ್ದು, ಅರ್ಧದಲ್ಲಿಯೇ ಧಾರಾವಾಹಿಯಿಂದ ಹೊರಬಂದಿದ್ದು ವೀಕ್ಷಕರಿಗೆ ಬೇಸರ ತಂದಿರುವುದಂತೂ ನಿಜ.


ಕಾದಂಬರಿ ಧಾರಾವಾಹಿಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಅನಿಕಾ ಮೊದಲ ಬಾರಿ ನಟಿಸಿದ್ದು ಖಳನಾಯಕಿಯಾಗಿ. ಮುಂದೆ ಮ ಗುಪ್ತಗಾಮಿನಿ, ಕುಂಕುಮಭಾಗ್ಯ, ಕಂಕಣ, ನನ್ನವಳು, ಸುಕನ್ಯಾ, ಮನೆಮಗಳು, ಶುಭಮಂಗಳ, ಮಂದಾರ, ಸೂರ್ಯಕಾಂತಿ, ಆಕಾಶದೀಪ ಲಕ್ಷ್ಮಿ ಬಾರಮ್ಮ ಧಾರಾವಾಹಿಗಳಲ್ಲಿ ನಟಿಸಿರುವ ಅನಿಕಾಗೆ ಜನಪ್ರಿಯತೆ ನೀಡಿದ್ದು ಕುಮುದಾ ಪಾತ್ರ.


ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಕುಮುದಾ ಆಗಿ ನಟಿಸಿ ಸೈ ಎನಿಸಿಕೊಂಡಿರುವ ಅನಿಕಾ ಇಂದಿಗೂ ಆ ಪಾತ್ರದ ಮೂಲಕವೇ ಗುರುತಿಸಿಕೊಳ್ಳುವ ಚೆಲುವೆ. ಇಂದಿಗೂ ಅನಿಕಾ ಹೆಸರು ಕೇಳಿದ ಕೂಡಲೇ ವೀಕ್ಷಕರಿಗೆ ನೆನಪಾಗುವ ಪಾತ್ರ ಕುಮುದಾ. ಅಷ್ಟರ ಮಟ್ಟಿಗೆ ಆ ಪಾತ್ರ ವೀಕ್ಷಕರ ಮನದಲ್ಲಿ ಅಚ್ಚೊತ್ತಿಬಿಟ್ಟಿತ್ತು. ಮುಂದೆ ಕವನ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಾಗ ಒಪ್ಪಿಕೊಂಡ ಅನಿಕಾ “ನಟಿಸಿದ ಧಾರಾವಾಹಿಗಳಲ್ಲೆಲ್ಲಾ ನಾನು ವಿಲನ್ ಆಗಿ ನಟಿಸಿದ್ದೇ ಹೆಚ್ಚು. ಇದೇ ಮೊದಲ ಬಾರಿಗೆ ಪಾಸಿಟಿವ್ ಪಾತ್ರದ ಮೂಲಕ ನಟಿಸುವ ಅವಕಾಶ ದೊರಕಿದೆ. ಪ್ರೇಕ್ಷಕರು ಯಾವ ರೀತಿಯಲ್ಲಿ ನನ್ನ ಪಾತ್ರವನ್ನು ಸ್ವೀಕರಿಸುತ್ತಾರೆ ಎಂಬ ಕುತೂಹಲ ನನ್ನಲ್ಲಿದೆ” ಎಂದಿದ್ದರು. ಆದರೆ ಈಗ ಅವರು ಪಾತ್ರದಿಂದ ಹೊರಬಂದಿದ್ದಾರೆ.


“ಕವನ ಪಾತ್ರ ಚೆನ್ನಾಗಿರಲಿಲ್ಲ. ಪಾತ್ರ ಯಾವುದೇ ಇದ್ದರೂ ಸರಿ, ಅದಕ್ಕೆ ಪ್ರಾಮುಖ್ಯತೆ ಇರಬೇಕಾದುದು ಮುಖ್ಯ. ಅದು ಈ ಪಾತ್ರಕ್ಕೆ ಇರಲಿಲ್ಲ. ನಾನು ಇಲ್ಲಿಯ ತನಕ ಮಾಡಿರುವಂತಹ ಪಾತ್ರಗಳಿಗೆ ಹೋಲಿಸಿದರೆ ಇದು ತುಂಬಾ ಡಮ್ಮಿಯಾಗಿತ್ತು. ಇದು ರಿಮೇಕ್ ಧಾರಾವಾಹಿ ಆದ ಕಾರಣ ಪ್ರೊಡಕ್ಷನ್ ತಂಡದವರಿಗೂ ಕತೆ ಮುಂದೇನಾಗುತ್ತದೆ ಎಂಬುದು ತಿಳಿದಿರಲಿಲ್ಲ. ಹಾಗಾಗಿ ನಾನು ಧಾರಾವಾಹಿಯಿಂದ ಹೊರಬಂದೆ” ಎನ್ನುವ ಅನಿಕಾ ನಟಿಸಲು ಅವಕಾಶ ಇರುವಂತಹ ಉತ್ತಮ ಪಾತ್ರಕ್ಕಾಗಿ ಕಾಯುತ್ತಿದ್ದಾರೆ




