• March 2, 2022

ಇದು ನನ್ನ ಹೃದಯಕ್ಕೆ ಹತ್ತಿರವಾದ ಸಿನಿಮಾ ಎಂದ ಚಿಕ್ಕಮಗಳೂರಿನ ಚೆಲುವೆ

ಇದು ನನ್ನ ಹೃದಯಕ್ಕೆ ಹತ್ತಿರವಾದ ಸಿನಿಮಾ ಎಂದ ಚಿಕ್ಕಮಗಳೂರಿನ ಚೆಲುವೆ

ನಟಿ ಗಾನವಿ ಲಕ್ಷ್ಮಣ್ ನಟನೆಯ ಭಾವಚಿತ್ರ ಸಿನಿಮಾ ಇತ್ತೀಚೆಗಷ್ಟೇ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ಪಡೆದಿರುವುದು ಸಿನಿ ಪ್ರಿಯರಿಗೆ ತಿಳಿದೇ ಇದೆ. ಭಾವಚಿತ್ರ ಸಿನಿಮಾ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ ಗಾನವಿ ಲಕ್ಷ್ಮಣ್ ಸದ್ಯ ಪರಭಾಷಾ ಸಿನಿರಂಗದಲ್ಲಿ ನಟನಾ ಕಂಪನ್ನು ಪಸರಿಸುತ್ತಿರುವುದು ಕೂಡಾ ವೀಕ್ಷಕರಿಗೆ ಗೊತ್ತಿರುವ ವಿಚಾರ.

ಮಗಳು ಜಾನಕಿ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಗಾನವಿ ಲಕ್ಷ್ಮಣ್ ಅವರು ಮೊದಲ ಧಾರಾವಾಹಿಯಲ್ಲಿಯೇ ಮನೆ ಮಾತಾದ ಚೆಲುವೆ ಅಂದರೆ ತಪ್ಪಲ್ಲ. ಇದೀಗ ಹಿರಿತೆರೆಯಲ್ಲಿಯೂ ಮೋಡಿ ಮಾಡಿರುವ ಗಾನವಿ “ಭಾವಚಿತ್ರ ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಸಿನಿಮಾ” ಎಂದಿದ್ದಾರೆ.

ಭಾವಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆಯೂ ವಿವರಿಸಿರುವ ಗಾನವಿ ಲಕ್ಷ್ಮಣ್ ” ಪ್ರಸ್ತುತ ಸಿನಿಮಾದಲ್ಲಿ ನಾನು ಪ್ರಾಚೀನ ವಸ್ತು ಶಾಸ್ತ್ರಜ್ಞೆ ಪಾತ್ರ ಮಾಡಿದ್ದೇನೆ. ನನ್ನ ಕೆಲಸ ಇಷ್ಟಪಟ್ಟು ಮಾಡುವವಳು. ಫೋಟೋಗ್ರಾಫಿ ಇಷ್ಟಪಡುವ ಹಾಗೂ ಕರ್ನಾಟಕ ಇಡೀ ಸುತ್ತಾಡಿ ಐತಿಹಾಸಿಕ ಸ್ಥಳಗಳು ಬಗ್ಗೆ ಹೇಳುವ ಹಾಗೂ ಸಮಾಜದ ಕುರಿತು ಚಿಂತಿಸುವ ಪಾತ್ರವಾಗಿದೆ”ಎನ್ನುತ್ತಾರೆ ಗಾನವಿ.

“ಮಗಳು ಜಾನಕಿ ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಹಿರಿತೆರೆಯಲ್ಲಿ ಕಾಣಿಸಿಕೊಳ್ಳಬೇಕು ಎಂದು ಬಯಸಿದ್ದೆ. ಭಾವಚಿತ್ರ ಸಿನಿಮಾದ ಕಥೆ ಕೇಳಿ ಖುಷಿಯಾಯಿತು. ಹಾಗಾಗಿ ನಟಿಸಲು ಒಪ್ಪಿಕೊಂಡೆ. ಇದೀಗ ಈ ಸಿನಿಮಾವನ್ನು, ಪತ್ರವನ್ನು ಕೂಡಾ ವೀಕ್ಷಕರು ಮೆಚ್ಚುತ್ತಾರೆ ಎಂಬ ಭರವಸೆ ನನಗಿದೆ” ಎಂದು ಹೇಳುತ್ತಾರೆ ಚಿಕ್ಕಮಗಳೂರಿನ ಚೆಲುವೆ.