• January 21, 2022

ವಿಭಿನ್ನ ಲುಕ್ ಮೂಲಕ ರಂಜಿಸಲು ತಯಾರಾಗಿದ್ದಾರೆ ಭೂಮಿ ಶೆಟ್ಟಿ

ವಿಭಿನ್ನ ಲುಕ್ ಮೂಲಕ ರಂಜಿಸಲು ತಯಾರಾಗಿದ್ದಾರೆ ಭೂಮಿ ಶೆಟ್ಟಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ ಧಾರಾವಾಹಿಯಲ್ಲಿ ನಾಯಕಿ ಮಣಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಕುಂದಾಪುರದ ಕುವರಿ ಭೂಮಿ ಶೆಟ್ಟಿ ಮೊದಲ ಧಾರಾವಾಹಿಯಲ್ಲಿಯೇ ಸೀರಿಯಲ್ ಪ್ರಿಯರ ಮನ ಸೆಳೆದ ಸ್ನಿಗ್ಧ ಸುಂದರಿ. ಕಿನ್ನರಿ ಧಾರಾವಾಹಿಯ ಮಣಿ ಪಾತ್ರದಿಂದ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದ ಭೂಮಿ ಶೆಟ್ಟಿ ತೆಲುಗಿನ ನಿನ್ನೇ ಪೆಳ್ಳಾಡಾತಾ ಧಾರಾವಾಹಿಯಲ್ಲಿ ನಾಯಕಿ ಮೃದುಲಾ ಆಗಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡಿದರು‌. ಪರಭಾಷೆಯಲ್ಲಿ ಸೈ ಎನಿಸಿಕೊಂಡಿರುವ ಭೂಮಿ ವೀಕ್ಷಕರಿಗೆ ಮತ್ತೂ ಹತ್ತಿರವಾಗಲು ಕಾರಣ ಬಿಗ್ ಬಾಸ್.

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಹೋಗಿದ್ದ ಭೂಮಿ ಶೆಟ್ಟಿ ಟಾಪ್ 5 ನೇ ಸ್ಥಾನ ಪಡೆದ ಚೆಲುವೆ. ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದೇ ನಿರೂಪಕಿಯಾಗುವ ಸುವರ್ಣಾವಕಾಶ ಅವರಿಗೆ ದೊರಕಿತು. ಮಜಾಭಾರತ ಕಾರ್ಯಕ್ರಮದ ನಿರೂಪಕಿಯಾಗಿ ಸೈ ಎನಿಸಿಕೊಂಡ ಕುಂದಾಪುರದ ಕುವರಿ ಮತ್ತೊಮ್ಮೆ ತೆಲುಗು ಕಿರುತೆರೆಯಲ್ಲಿ ಅಭಿನಯಿಸುವ ಸುವರ್ಣಾವಕಾಶ ಪಡೆದರು.

ತೆಲುಗಿನ ಅಕ್ಕ ಚೆಲುಲುವಿನಲ್ಲಿ ನಾಯಕಿಯಾಗಿ ನಟಿಸಿದ್ದ ಭೂಮಿ ಇಕ್ಕಟ್ ಸಿನಿಮಾದ ಮೂಲಕ ಹಿರಿತೆರೆಗೆ ಹಾರಿದರು. ಮೊದಲ ಸಿನಿಮಾದಲ್ಲಿಯೇ ಸಿನಿ ವೀಕ್ಷಕರ ಮನ ಸೆಳೆದಿರುವ ಭೂಮಿ ಶೆಟ್ಟಿ ನಂತರ ವಾಸಂತಿ ಎನ್ನುವ ಕಲಾತ್ಮಕ ಸಿನಿಮಾದಲ್ಲಿ ಗೇರುಬೀಜ ಪ್ಯಾಕ್ಟರಿಯಲ್ಲಿ ಕೆಲಸ ಮಾಡುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

ವನಜ ವೆಬ್ ಸಿರೀಸ್ ನಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಭೂಮಿ ಶೆಟ್ಟಿ ಹೋಟೆಲ್ ವನಜ, ಮಾಂಸಾಹಾರಿ ಇದರ ಓನರ್ ಆಗಿ ಅಭಿನಯಿಸಿದ್ದಾರೆ.ಇದೀಗ ಸಂದೇಶ್ ಅಜ್ರಿ ನಿರ್ದೇಶನದ ಇಮಾನ್ದಾರ್ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಲಿರುವ ಭೂಮಿ ಶೆಟ್ಟಿ ಸಕತ್ ಖುಷಿಯಾಗಿದ್ದಾರೆ.

“ಇಮಾನ್ದಾರ್ ಸಿನಿಮಾದಲ್ಲಿ ನಾನು ಟ್ರೈಬಲ್ ಗ್ಲಾಮರ್ ಅವತಾರದಲ್ಲಿ ನಿಮ್ಮ ಮುಂದೆ ಬರಲಿದ್ದೇನೆ. ನಿರ್ದೇಶಕರು ಕಥೆ ಹೇಳಿದ್ದೇ ತಡ ನಾನು ತುಂಬಾ ಇಂಪ್ರೆಸ್ ಆದೆ. ಜನಾಂಗೀಯ ಸಂಘರ್ಷದ ಸುತ್ತ ನಡೆಯುವ ಕಥೆಯಾಗಿದ್ದು, ಪೂರ್ತಿ ಕಥೆ ನನ್ನ ಪಾತ್ರದ ಸುತ್ತಾ ಸುತ್ತುವುದು ವಿಶೇಷ‌. ಅದೇ ಕಾರಣದಿಂದ ನಾನು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡೆ” ಎನ್ನುತ್ತಾರೆ ಭೂಮಿ ಶೆಟ್ಟಿ.

“ಇಮಾನ್ದಾರ್ ನಲ್ಲಿ ಭುವಿ ಪಾತ್ರಕ್ಕೆ ನಾನು ಜೀವ ತುಂಬಲಿದ್ದು ಕುಂದಾಪುರ ಕನ್ನಡದಲ್ಲಿ ಮಾತನಾಡಲಿದ್ದೇನೆ. ಒಟ್ಟಿನಲ್ಲಿ ತುಂಬಾ ಸಂತಸವಾಗುತ್ತಿದೆ” ಎನ್ನುತ್ತಾರೆ ಕುಂದಾಪುರದ ಕುವರಿ