- April 3, 2022
ರಗಡ್ ಅವತಾರದ ಮೂಲಕ ರಂಜಿಸಲಿದ್ದಾರೆ ಚಿನ್ನಾರಿಮುತ್ತ


ಕನ್ನಡದ ಬ್ಯುಸಿಯೆಸ್ಟ್ ನಟರಲ್ಲಿ ವಿಜಯ್ ರಾಘವೇಂದ್ರ ಕೂಡಾ ಒಬ್ಬರು. ಸಿನಿಮಾದ ಜೊತೆಗೆ ಟಿವಿ ಶೋಗಳಲ್ಲಿ ಬ್ಯುಸಿ ಇರುವ ನಟ ಈಗ “ರಾಘು” ಎಂಬ ಹೊಸ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಈ ಸಿನಿಮಾವನ್ನು ಆನ ಹಾಗೂ ಬ್ಯಾಂಗ್ ನಂತಹ ಚಿತ್ರಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ಆನಂದ್ ರಾಜ್ ನಿರ್ದೇಶನ ಮಾಡಲಿದ್ದಾರೆ. ಸಿನಿಮಾದ ನಾಯಕಿಯ ಬಗ್ಗೆ ಚಿತ್ರತಂಡ ಇನ್ನೂ ಮಾಹಿತಿ ಬಿಟ್ಟು ಕೊಟ್ಟಿಲ್ಲ.


ಈ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಸಿನಿಮಾದ ಶೀರ್ಷಿಕೆ ಹಾಗೂ ಪೋಸ್ಟರ್ ಗುರುವಾರ ಬಿಡುಗಡೆ ಆಗಿದ್ದು ವಿಜಯ್ ರಾಘವೇಂದ್ರ ರಕ್ತದಲ್ಲಿ ಮುಚ್ಚಿ ಹೋಗುವಂತೆ ಕಾಣಿಸಿಕೊಂಡಿದ್ದಾರೆ. “ವಿಜಯ್ ನಮ್ಮ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಖುಷಿ ಇದೆ.ಇದೊಂದು ಪ್ರಯೋಗಾತ್ಮಕ ಚಿತ್ರ ಆಗಿದ್ದು ಸ್ಯಾಂಡಲ್ ವುಡ್ ನಲ್ಲಿ ಹಿಂದೆ ಯಾರೂ ಪ್ರಯತ್ನ ಮಾಡಿಲ್ಲ. ಈ ಕಾನ್ಸೆಪ್ಟ್ ಹೊಸದಾಗಿದೆ . ಇದು ಇಂಡಸ್ಟ್ರಿಯಲ್ಲಿ ಹೊಸ ಭಾಷ್ಯ ಸೃಷ್ಟಿಸಲಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಶೂಟಿಂಗ್ ನಡೆಯಲಿದೆ. ವಿಜಯ್ ರಾಘವೇಂದ್ರ ಕೆರಿಯರ್ ನಲ್ಲಿ ಮೊದಲ ಬಾರಿಗೆ ಇಂತಹ ಪಾತ್ರದಲ್ಲಿ ನಟಿಸಿದ್ದಾರೆ” ಎಂದಿದ್ದಾರೆ ನಿರ್ದೇಶಕ ಆನಂದ್ ರಾಜ್.


ಇದೇ ಬರುವ ಮೇ ತಿಂಗಳಿನಿಂದ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಇನ್ನು ಮುಖ್ಯವಾದ ವಿಚಾರವೆಂದರೆ ಸ್ವತಃ ವಿಜಯ್ ರಾಘವೇಂದ್ರ ಅವರೇ ಈ ಸಿನಿಮಾಕ್ಕೆ ‘ರಾಘು ಎಂಬ ಟೈಟಲ್ ಇಡಲು ಸಲಹೆ ನೀಡಿದ್ದರು ರಗಡ್ ಅವತಾರದಲ್ಲಿ ವಿಜಯ್ ರಾಘವೇಂದ್ರ ಅವರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು ಅವರು ಈಗಾಗಲೇ ತಮ್ಮ ಪಾತ್ರದ ಬಗ್ಗೆ ಬಹಳ ಎಕ್ಸೈಟ್ ಆಗಿದ್ದಾರೆ”ಎಂದು ಹೇಳುತ್ತಾರೆ ನಿರ್ದೇಶಕ ಆನಂದ್ ರಾಜ್.


ಇದಲ್ಲದೇ ವಿಜಯ್ ರಾಘವೇಂದ್ರ ಅವರು ಜೋಗ್ 101 ಸಿನಿಮಾದಲ್ಲಿ ಅಭಿನಯಿಸಲಿದ್ದು ಸದ್ಯ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.






