• July 19, 2022

“ರಕ್ಷಿತ್ ಶೆಟ್ಟಿಯವರ ತಂಡ ಸೇರಿರುವುದು ಅತೀವ ಸಂತಸ ತಂದಿದೆ”:ವಿಹಾನ್.

“ರಕ್ಷಿತ್ ಶೆಟ್ಟಿಯವರ ತಂಡ ಸೇರಿರುವುದು ಅತೀವ ಸಂತಸ ತಂದಿದೆ”:ವಿಹಾನ್.

ಕನ್ನಡ ಚಿತ್ರರಂಗದಲ್ಲಿ ಸದ್ಯ ಹಲವು ಯುವನಟರು ಯಾವುದೇ ಹಿನ್ನೆಲೆಯಿಲ್ಲದೇ, ತಮ್ಮ ಪ್ರತಿಭೆಯಿಂದಲೇ ಗುರುತಿಸಿಕೊಳ್ಳುತ್ತಿದ್ದಾರೆ. ಅಂತವರಲ್ಲಿ ‘ಪಂಚತಂತ್ರ’ ಸಿನಿಮಾ ಖ್ಯಾತಿಯ ವಿಹಾನ್ ಗೌಡ ಕೂಡ ಒಬ್ಬರು. ಯೋಗರಾಜ್ ಭಟ್ ಅವರ ನಿರ್ದೇಶನದ ‘ಪಂಚತಂತ್ರ’ ಮೂಲಕ ನಾಯಕನಾಗಿ ಚಂದನವನಕ್ಕೆ ಬಂದ ಇವರು, ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಾಣದೇ ಇದ್ದರೂ, ತಮ್ಮ ನಟನೆಯಿಂದ ಕನ್ನಡಿಗರ ಮನಗೆದ್ದರು. ಇದೀಗ ಇದೇ ವಿಹಾನ್ ಕನ್ನಡದ ಖ್ಯಾತ ಸಿನಿ ನಿರ್ಮಾಣ ಸಂಸ್ಥೆಯಾದ ರಕ್ಷಿತ್ ಶೆಟ್ಟಿಯವರ ‘ಪರಮ್ ವಾಹ್ ಸ್ಟುಡಿಯೋಸ್’ನ ಮುಂದಿನ ಸಿನಿಮಾದಲ್ಲಿ ನಟಿಸಲು ಸಿದ್ದರಾಗಿದ್ದಾರೆ. ಈ ಬಗ್ಗೆ ಅವರು ತಮ್ಮ ಮಾತುಗಳನ್ನು ಹೊರಹಾಕಿದ್ದಾರೆ.

“ನನಗೆ ಈ ಸಿನಿಮಾದ ಆಫರ್ ಇದ್ದಕ್ಕಿದ್ದಂತೆ ಬಂದದ್ದು. ನಂತರ ನಿರ್ದೇಶಕ ಚಂದ್ರಜಿತ್ ಹಾಗು ಪರಮ್ ವಾಹ್ ಸಂಸ್ಥೆ, ‘ಪಂಚತಂತ್ರ’ ಸಿನಿಮಾದಲ್ಲಿನ ನನ್ನ ನಟನೆ ಕಂಡು, ನನ್ನನ್ನೇ ಆಯ್ಕೆ ಮಾಡಿದ್ದಾರೆ ಎಂದು ತಿಳಿದಾಗ ಅಪಾರ ಆನಂದವಾಗಿತ್ತು. ಯಾವುದೇ ಹಿನ್ನೆಲೆಯಿಲ್ಲದೇ ಬಂದಂತಹ ಒಬ್ಬ ನಟನಿಗೆ ಇದೊಂದು ಹೆಮ್ಮೆ ನೀಡುವ ವಿಚಾರ. ‘ಪರಮ್ ವಾಹ್ ಸ್ಟುಡಿಯೋಸ್’ನಂತಹ ನಿರ್ಮಾಣ ಸಂಸ್ಥೆಯ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಅತೀವ ಸಂತಸ ತಂದಿದೆ” ಎಂದಿದ್ದಾರೆ.

‘ಸೆವೆನ್ ಓಡ್ಸ್’ನ ಚಂದ್ರಜಿತ್ ಬೆಳ್ಳಿಯಪ್ಪ ಅವರು ನಿರ್ದೇಶಿಸುತ್ತಿರುವ ಈ ಹೊಸ ಸಿನಿಮಾದಲ್ಲಿ ವಿಹಾನ್ ಹಾಗು ಅಂಕಿತಾ ಅಮರ್ ಜೋಡಿಯಾಗಿ ನಟಿಸುತ್ತಿದ್ದಾರೆ. ಇದಷ್ಟೇ ಅಲ್ಲದೇ ವಿಹಾನ್ ‘ಲೆಗಸಿ’ ಎಂಬ ಎರಡು ಭಾಗಗಳಲ್ಲಿ ಬರುತ್ತಿರುವ ಸಿನಿಮಾವೊಂದರಲ್ಲೂ ನಟಿಸುತ್ತಿದ್ದಾರೆ. ಜೊತೆಗೆ ‘ಪುಷ್ಪಕ ವಿಮಾನ’ ಸಿನಿಮಾ ಖ್ಯಾತಿಯ ರವೀಂದ್ರನಾಥ್ ಅವರ ಮುಂದಿನ ಚಿತ್ರಕ್ಕೆ ವಿಹಾನ್ ಅವರನ್ನು ನಾಯಕನಾಗಿ ಆರಿಸಲಾಗಿದೆ ಎಂಬ ಸುದ್ದಿಗಳು ಓಡಾಡುತ್ತಿವೆ.