• February 11, 2022

ಬುದ್ದಿಮಾಂದ್ಯನಾಗಿ ತೆರೆ ಮೇಲೆ ಬರಲಿದ್ದಾರೆ ಕೊಡಗಿನ ಕುವರ

ಬುದ್ದಿಮಾಂದ್ಯನಾಗಿ ತೆರೆ ಮೇಲೆ ಬರಲಿದ್ದಾರೆ ಕೊಡಗಿನ ಕುವರ

ಕಿರುತೆರೆಯ ಮೂಲಕ ನಟನಾ ಪಯಣ ಶುರು ಮಾಡಿದ ಅನೇಕರು ಇಂದು ಹಿರಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ತೀರಾ ಮಾಮೂಲಿಯಾದ ಸಂಗತಿ‌. ಆದರೆ ತಾರಕ್ ಪೊನ್ನಪ್ಪ ವಿಷಯದಲ್ಲಿ ಇದು ಕೊಂಚ ಭಿನ್ನ. ಯಾಕೆಂದರೆ ಹಿರಿತೆರೆ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ತಾರಕ್ ಪೊನ್ನಪ್ಪ ಮುಂದೆ ಕಿರುತೆರೆಯಲ್ಲೂ ಕಮಾಲ್ ಮಾಡಿದ ಪ್ರತಿಭೆ.

ಅಜರಾಮರ ಸಿನಿಮಾ ಮೂಲಕ ಬಣ್ಣದ ನಂಟು ಬೆಳೆಸಿಕೊಂಡ ಕೊಡಗಿನ ಕುವರ ತಾರಕ್ ಬೃಹಸ್ಪತಿ ಸಿನಿಮಾದಲ್ಲಿ ಖಳನಾಯಕನಾಗಿ ಮೋಡಿ ಮಾಡಿದರು. ಮುಂದೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಜ ರಾಣಿ ಧಾರಾವಾಹಿಯಲ್ಲಿ ಎಕ್ಸ್ ಆರ್ಮಿ ಆಫೀಸರ್ ಒಂಕಾರ್ ಆಗಿ ಕಾಣಿಸಿಕೊಂಡಿದ್ದರು.

ತದ ನಂತರ ಕನ್ನಡ ಸಿನಿರಂಗದ ಬ್ಲಾಕ್ ಬಾಸ್ಟರ್ ಸಿನಿಮಾ ಕೆಜಿಎಫ್ ನಲ್ಲಿ ಗ್ಯಾಂಗ್ ಸ್ಟರ್ ಆಗಿ ಕಾಣಿಸಿಕೊಂಡ ತಾರಕ್ ಪೊನ್ನಪ್ಪ ಯುವ ರತ್ನ ಹಾಗೂ ಮೋಕ್ಷ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇಂತಿಪ್ಪ ಹ್ಯಾಂಡ್ ಸಮ್ ಹುಡುಗ ಇದೀಗ ಬುದ್ದಿಮಾಂದ್ಯನಾಗಿ ನಿಮ್ಮನ್ನು ರಂಜಿಸಲು ತಯಾರಾಗಿದ್ದಾರೆ.

ಹೌದು, ಗಿಲ್ಕಿ ಎನ್ನುವ ಸಿನಿಮಾದಲ್ಲಿ ನಾಯಕ ಗಿಲ್ಕಿ ಆಗಿ ತಾರಕ್ ಪೊನ್ನಪ್ಪ ನಟಿಸುತ್ತಿದ್ದು ಬುದ್ದಿಮಾಂದ್ಯನಾಗಿ ಅಭಿನಯಿಸಿದ್ದಾರೆ.
ಪ್ರೀತಿಯ ಆಳ ಅಗಲಗಳನ್ನು ತಿಳಿಸುವ ಈ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಗೊಂಡಿದ್ದು ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ. ಇನ್ನು ಈ ಸಿನಿಮಾ ಫೆಬ್ರವರಿ 18 ರಂದು ಬಿಡುಗಡೆಯಾಗಲಿದ್ದು ಸಿನಿಪ್ರಿಯರು ಮೆಚ್ಚಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಾಗಿದೆ.