- June 15, 2022
ಬಾಲ್ಯದ ಕನಸು ನನಸಾಗಿದೆ – ರಕ್ಷಿತ್ ಅರಸ್ ಗೋಪಾಲ್


ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಮಣಿಗಳು ಧಾರಾವಾಹಿಯಲ್ಲಿ ನಾಯಕ ಶಿವು ಆಲಿಯಾಸ್ ಗೌರವ್ ಆಗಿ ಅಭಿನಯಿಸುತ್ತಿರುವ ರಕ್ಷಿತ್ ಅರಸ್ ಗೋಪಾಲ್ ಚಿಕ್ಕ ವಯಸ್ಸಿನಿಂದಲೂ ನಟನಾಗಬೇಕು, ಬಣ್ಣದ ಜಗತ್ತಿನಲ್ಲಿ ಬದುಕು ರೂಪಿಸಿಕೊಳ್ಳಬೇಕು ಎಂಬ ಕನಸು ಕಂಡ ಹುಡುಗ. ಪೋಷಕ ಪಾತ್ರಗಳ ಮೂಲಕ ನಟನೆಗೆ ಎಂಟ್ರಿ ಕೊಟ್ಟು ಇದೀಗ ನಾಯಕನಾಗಿ ಭಡ್ತಿ ಪಡೆದು ಗುರುತಿಸಿಕೊಂಡಿರುವ ರಕ್ಷಿತ್ ಅರಸ್ ಗೋಪಾಲ್ ಸಾಂಸ್ಕೃತಿಕ ನಗರಿ ಮೈಸೂರಿನವರು.


ನಟನಾಗಬೇಕು ಎಂಬ ಒಂದೇ ಉದ್ದೇಶ ಇದ್ದುದರಿಂದಲೋ ಏನೋ, ಪದವಿ ಮುಗಿದದ್ದೇ ತಡ, ಮಂಡ್ಯ ರಮೇಶ್ ಅವರ ನಟನಾ ಸಂಸ್ಥೆ ಸೇರಿ ನಟನೆಯ ಬಗ್ಗೆ ತಿಳಿದುಕೊಂಡರು, ಅರಿತುಕೊಂಡರು. ಸಹಜವಾಗಿ ಕೆಲವೊಂದು ನಾಟಕಗಳಲ್ಲಿಯೂ ನಟಿಸಿದರು.




ಮುಂದೆ ಹುಬ್ಬಳ್ಳಿಯಲ್ಲಿ ನಟನಾ ಕೋರ್ಸ್ ಗೆ ಸೇರಿದ ರಕ್ಷಿತ್ ಅರಸ್ ಗೋಪಾಲ್ ನಟರಾಜ್ ಹೊನ್ನವಳ್ಳಿ ಅವರಿಂದಲೂ ಸಾಕಷ್ಟು ವಿಚಾರಗಳನ್ನು ಕಲಿತರು. ಕೇವಲ ನಾಟಕ ಮಾತ್ರವಲ್ಲದೇ ಮೈಮ್, ಯಕ್ಷಗಾನದಲ್ಲೂ ಸಕ್ರಿಯರಾಗಿದ್ದ ಇವರು ಶಾಲಾ ವಿದ್ಯಾರ್ಥಿಗಳಿಗೆ ನಾಟಕಗಳನ್ನು ಕಲಿಸುವುದರ ಜೊತೆಗೆ ವರ್ಕ್ ಶಾಪ್ ಗಳನ್ನು ಕೂಡಾ ಮಾಡುತ್ತಿದ್ದರು.


ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಹಾದೇವಿ ಧಾರಾವಾಹಿಯ ಮೂಲಕ ಕಿರುತೆರೆಗೆ ಹಾರಿದ ರಕ್ಷಿತ್ ಅರಸ್ ಗೋಪಾಲ್ ಶ್ರುತಿ ನಾಯ್ಡು ಅವರಿಂದಲೂ ನಟನೆಯ ಬಗ್ಗೆ ಇನ್ನಷ್ಟು ತಿಳಿದು ಪಕ್ವವಾದರು. ನಂತರ ರಘುಚರಣ್ ನಿರ್ದೇಶನದ ಮಾಂಗಲ್ಯಂ ತಂತು ನಾನೇನಾ ಧಾರಾವಾಹಿಯಲ್ಲಿ ನಾಯಕನ ಅಣ್ಣನಾಗಿ ನಟಿಸಿದ್ದ ರಕ್ಷಿತ್ ಮುಂದೆ ಯಜಮಾನಿ ಧಾರಾವಾಹಿಯಲ್ಲಿಯೂ ಬಣ್ಣ ಹಚ್ಚಿದ್ದರು.


ಪೋಷಕ ಪಾತ್ರಗಳಿಂದಲೇ ಮನ ಸೆಳೆಯುತ್ತಿದ್ದ ರಕ್ಷಿತ್ ಮತ್ತೆ ವಸಂತ ಧಾರಾವಾಹಿಯಲ್ಲಿ ನಾಯಕ ವಸಂತ ಆಗಿ ಅಭಿನಯಿಸುವ ಮೂಲಕ ಮೊದಲ ಬಾರಿಗೆ ನಟನಾಗಿ ಕಾಣಿಸಿಕೊಂಡರು. ವಸಂತನಾಗಿ ವೀಕ್ಷಕರನ್ನು ರಂಜಿಸಿದ ರಕ್ಷಿತ್ ಇದೀಗ ಶಿವು ಆಲಿಯಾಸ್ ಗೌರವ್ ಆಗಿ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಮಾತ್ರವಲ್ಲ ತನ್ನ ಬಾಲ್ಯದ ಕನಸನ್ನು ನನಸು ಮಾಡಿಕೊಂಡ ಸಂತಸ ರಕ್ಷಿತ್ ಅವರದು.




