• March 9, 2022

ಕಿರುತೆರೆಯ ಹ್ಯಾಂಡ್ ಸಮ್ ಹುಡುಗನಿಗೆ ನಟನೆಯೇ ಉಸಿರು

ಕಿರುತೆರೆಯ ಹ್ಯಾಂಡ್ ಸಮ್ ಹುಡುಗನಿಗೆ ನಟನೆಯೇ ಉಸಿರು

ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಪದವಿ ಪಡೆದಿರುವ ಈತ ಆಯ್ದುಕೊಂಡದ್ದು ನಟನೆಯನ್ನು. ಅಂದ ಹಾಗೇ ನಾವು ಮಾತನಾಡುತ್ತಿರುವುದು ಕಿರುತೆರೆಯ ಹ್ಯಾಂಡ್ ಸಮ್ ನಟ ಧನುಷ್ ಗೌಡ ಅವರ ಬಗ್ಗೆ. ಅರೇ ಧನುಷ್ ಯಾರು ಅಂಥ ಯೋಚನೆ ಮಾಡ್ತಿದ್ದೀರಾ? ಅವರು ಬೇರಾರೂ ಅಲ್ಲ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿಯ ನಾಯಕ ವಿಜಯ್.

ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ಜಗತ್ತಿನಲ್ಲಿ ಮನೆ ಮಾತಾಗಿರುವ ಧನುಷ್ ಗೌಡ ನಟನಾಗಿದ್ದಾರೆ ಎಂದರೆ ಅದಕ್ಕೆ ಮಾವ ಮತ್ತೆ ತಮ್ಮ ಅವರೇ ಮುಖ್ಯ ಕಾರಣ. “ನೀನು ನೋಡೋದಕ್ಕೆ ಚೆನ್ನಾಗಿದ್ದೀಯಾ. ನೀನ್ಯಾಕೆ ನಟಿಸಬಾರದು? ಎಂದು ಕೇಳಿದರು. ಆ ಮಾತನ್ನೇ ಗಟ್ಟಿಯಾಗಿ ತೆಗೆದುಕೊಂಡ ಧನುಷ್ ಗೌಡ ನಟನಾಗುವ ನಿರ್ಧಾರ ಮಾಡಿದರು.

ನಟನಾಗಬೇಕು ಎಂದರೆ ಕೊಂಚ ಮಟ್ಟಿಗೆ ನಟನೆಯ ಬಗ್ಗೆ ತಿಳಿದಿರಬೇಕು. ಇಲ್ಲ ನಟನೆಯ ಆಗು ಹೋಗುಗಳು ಅರಿತಿರಬೇಕು‌‌. ನಟನೆಯ ಕುರಿತಾದ ಸಣ್ಣ ಅನುಭವವೂ ಇರದ ಧನುಷ್ ಗೌಡ ನಾಗತಿಹಳ್ಳಿ ಅವರ ಟೆಂಟ್ ಸಿನಿಮಾ ಸೇರಿ ನಟನೆಯ ಆಳ ಅಗಲ ತಿಳಿದರು. ವಿಜಯ್ ಆಗಿ ಕಿರುತೆರೆಗೆ ಕಾಲಿಟ್ಟ ಧನುಷ್ ಕಡಿಮೆ ಅವಧಿಯಲ್ಲಿಯೇ ಮನೆ ಮಾತಾದರು.

” ಗೀತಾ ಧಾರಾವಾಹಿಯಲ್ಲಿ ನಾನು ನಾಯಕ ಆಗಿ ನಟಿಸುತ್ತಿದ್ದೇನೆ. ಮೊದಲ ಧಾರಾವಾಹಿಯಲ್ಲಿಯೇ ಪ್ರಮುಖ ಪಾತ್ರ ಸಿಕ್ಕಿದ್ದು ನಾನು ಈ ಧಾರಾವಾಹಿಯಲ್ಲಿ ಕಾಲೇಜು ಹುಡುಗನಾಗಿ ಕಾಣಿಸಿಕೊಂಡಿದ್ದೇನೆ. ಪಾತ್ರ ಒಂದೇ ನಿಜ, ಆದರೆ ಈಗಾಗಲೇ ಹಲವು ಅವತಾರಗಳಿಗೆ ನಾನು ಜೀವ ತುಂಬಿದ್ದೇನೆ. ಹೀರೋ, ವಿಲನ್, ಪೂಜಾರಿ, ಹುಡುಗಿ ಹೀಗೆ ನಾನಾ ಅವತಾರದಲ್ಲಿ ನಟಿಸಿದ್ದು ಸಂತಸ ತಂದಿದೆ” ಎಂದು ಹೇಳುತ್ತಾರೆ ಧನುಷ್ ಗೌಡ.

“ಮೊದಲ ದಿನದ ಶೂಟಿಂಗ್ ನ ಅನುಭವ ಅದ್ಭುತವಾಗಿತ್ತು. ಅದನ್ನು ನಾನು ಯಾವತ್ತಿಗೂ ಮರೆಯುವುದಿಲ್ಲ. ನಟನಾಗುತ್ತೇನೆ ಎಂಬ ಖುಷಿ ಒಂದೆಡೆಯಾದರೆ, ನಟನೆ ಎಂಬುದು ಹೊಸತು. ಹೇಗೆ ನಟಿಸುವುದು ಎನ್ನುವ ಭಯವೂ ಕಾಡುತ್ತಿತ್ತು. ಆದರೆ ಧಾರಾವಾಹಿಯ ತಂಡದವರು ನೀಡಿದ ಪ್ರೋತ್ಸಾಹದಿಂದ ಎಲ್ಲವೂ ಸರಾಗವಾಗಿ ಸಾಗಿತು” ಎನ್ನುತ್ತಾರೆ ಧನುಷ್ ಗೌಡ.

“ನಾನಿಂದು ವಿಜಯ್ ಆಗಿ ಗುರುತಿಸಿಕೊಳ್ಳುತ್ತಿದ್ದೇನೆ ಎಂದರೆ ಅದಕ್ಕೆ ನಮ್ಮ ಧಾರಾವಾಹಿ ತಂಡದ ನಿರ್ದೇಶಕ, ನಿರ್ಮಾಪಕರೇ ಕಾರಣ. ಕಲರ್ಸ್ ಕನ್ನಡ ವಾಹಿನಿಯವರಿಗೆ, ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ಅದೆಷ್ಟೋ ಧನ್ಯವಾದ ಹೇಳಿದರೂ ಕಡಿಮೆ” ಎಂದು ಹೇಳುತ್ತಾರೆ ಧನುಷ್ ಗೌಡ.