- January 23, 2022
ಕಿರುತೆರೆಯತ್ತ “ಮರಳಿ ಮನಸ್ಸಾಗಿದೆ” ಎಂದ ದೀಪಕ್ ಮಹಾದೇವ್


ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಿನ್ನಿಂದಲೇ ಧಾರಾವಾಹಿಯಲ್ಲಿ ನಾಯಕ ವರುಣ್ ಆಗಿ ಅಭಿನಯಿಸಿದ್ದ ದೀಪಕ್ ಮಹಾದೇವ್ ಅವರಿಗೆ ಕಿರುತೆರೆಯತ್ತ “ಮರಳಿ ಮನಸ್ಸಾಗಿದೆ”. ಅದೇ ಕಾರಣದಿಂದ ಕಿರುತೆರೆಯತ್ತ ಮುಖ ಮಾಡಿರುವ ದೀಪಕ್ ಮಹಾದೇವ್ ಇದೀಗ ಡಾಕ್ಟರ್ ಪಾತ್ರದ ಮೂಲಕ ಮರಳಿ ಬಂದಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮರಳಿ ಮನಸ್ಸಾಗಿದೆ ಧಾರಾವಾಹಿಯಲ್ಲಿ ಡಾಕ್ಟರ್ ಅಜಯ್ ಆಗಿ ನಿಮ್ಮನ್ನು ರಂಜಿಸಲಿದ್ದಾರೆ.


ನಾಯಕ್ ಕುಟುಂಬಕ್ಕೂ, ಡಾಕ್ಟರ್ ಅಜಯ್ ಗೂ ಅದೇನು ಸಂಬಂಧ, ನಾಯಕ್ ಕುಟುಂಬದ ಹಿರಿಸೊಸೆ ಚಂದ್ರಲೇಖಾ ಮಗಳು ಸಾಹಿತ್ಯ ಮದುವೆಯಾಗಿದ್ದು, ಆಕೆ ಮನೋರೋಗದಿಂದ ಬಳಲುತ್ತಿರುವ ಕಾರಣ ತನ್ನ ಪತಿಯಿಂದ ದೂರವಿದ್ದಾಳೆ. ಅವಳ ಪತಿಯೇ ಅಜಯ್ ಆಗಿರಬಹುದಾ ಎಂಬ ಕುತೂಹಲ ವೀಕ್ಷಕರಿಗೆ ಈಗಾಗಲೇ ಮೂಡಿದ್ದು ಅದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಾಗಿದೆ.


ಆಕಸ್ಮಿಕವಾಗಿ ದೊರೆತ ಅವಕಾಶದಿಂದ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿರುವ ದೀಪಕ್ ಮಹಾದೇವ್ ನಟಿಸಿದ್ದು ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ಮಾತ್ರವಾದರೂ ತಮ್ಮ ನಟನೆ, ಪಾತ್ರದ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ ನಾ ನಿನ್ನ ಬಿಡಲಾರೆಯ ಅಕ್ಷಯ್ ಆಗಿ ಕಿರುತೆರೆಗೆ ಪಾದಾರ್ಪಣೆ ಮಾಡಿದ ದೀಪಕ್ ಮುಂದೆ ನಾಯಕಿ ಧಾರಾವಾಹಿಯಲ್ಲಿ ನಾಯಕ ಸಿದ್ಧಾರ್ಥ್ ಆಗಿ ಮಿಂಚಿದರು.


ತದ ನಂತರ ನಿನ್ನಿಂದಲೇ ಧಾರಾವಾಹಿಯ ವರುಣ್ ಆಗಿ ಬದಲಾದ ದೀಪಕ್ ಮನೋಜ್ಞ ನಟನೆಯ ಮೂಲಕ ಮನೆ ಮಾತಾದ ಪ್ರತಿಭೆ ಹೌದು. ಇದೀಗ ಡಾಕ್ಟರ್ ಅಜಯ್ ಆಗಿ ಹೊಸ ಇನ್ನಿಂಗ್ಸ್ ಶುರು ಮಾಡಿರುವ ದೀಪಕ್ ಅವರಿಗೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್.






