• March 4, 2022

ಇಂತಹ ಪಾತ್ರಕ್ಕಾಗಿ ಕಾಯುತ್ತಿದ್ದೆ ಎಂದ ದೀಕ್ಷಿತ್ ಶೆಟ್ಟಿ… ಯಾವ ಪಾತ್ರ ಗೊತ್ತಾ?

ಇಂತಹ ಪಾತ್ರಕ್ಕಾಗಿ ಕಾಯುತ್ತಿದ್ದೆ ಎಂದ ದೀಕ್ಷಿತ್ ಶೆಟ್ಟಿ… ಯಾವ ಪಾತ್ರ ಗೊತ್ತಾ?

ನಾಗಿಣಿ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ಕುಂದಾಪುರದ ಕುವರ ದೀಕ್ಷಿತ್ ಶೆಟ್ಟಿ ಸದ್ಯ ಹಿರಿತೆರೆಯಲ್ಲಿ ಬ್ಯುಸಿ. ದಿಯಾ ಸಿನಿಮಾದ ರೋಹಿತ್ ಆಗಿ ಹಿರಿತೆರೆಗೆ ಪಾದಾರ್ಪಣೆ ಮಾಡಿದ ಹ್ಯಾಂಡ್ ಸಮ್ ಹುಡುಗ ಒಂದಾದ ಮೇಲೆ ಒಂದರಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಇಂತಿಪ್ಪ ದೀಕ್ಷಿತ್ ಶೆಟ್ಟಿ
ಇದೀಗ ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ.
ಇದು ಸೈನ್ಸ್ ಫಿಕ್ಷನ್ ಸಿನಿಮಾ ಆಗಿದ್ದು ಶ್ರೀನಿಧಿ ಎಂಬುವವರು ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಚಂದನವನಕ್ಕೆ ಕಾಲಿಡಲಿದ್ದಾರೆ. ಹೊಸ ಪ್ರತಿಭೆ ಮಂದಾರ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದು ಬೆಂಗಳೂರಿನಲ್ಲಿ ಶೂಟಿಂಗ್ ನಡೆಯುತ್ತಿದೆ.

‌”ಸಿನಿಮಾ ನಿರ್ದೇಶಕ ಶ್ರೀನಿಧಿಗೂ ನನಗೂ ಬಹಳ ವರ್ಷಗಳ ಪರಿಚಯ. ನಾವಿಬ್ಬರೂ ಜೊತೆಯಾಗಿ ನಾಟಕ ತಂಡದಲ್ಲಿ ಕೆಲಸ ಮಾಡಿದ್ದೇವೆ. ಒಬ್ಬರಿಗೊಬ್ಬರು ಉತ್ತಮ ಬಾಂಧವ್ಯವನ್ನು ನಾವು ಹೊಂದಿದ್ದೇವೆ. ಅದೇ ಬಾಂಧವ್ಯ ಲ ನಮ್ಮನ್ನು ಈ ಸಿನಿಮಾಕ್ಕೆ ಸೇರಿಸಿತು. ಈ ಸಿನಿಮಾದಲ್ಲಿ ಪಾತ್ರಗಳು ವಿವಿಧ ಆಯಾಮಗಳನ್ನು ಹೊಂದಿವೆ. ಇಡೀ ಕಥಾವಸ್ತು ರಂಗಭೂಮಿ ಪರಿಕಲ್ಪನೆಯ ಸುತ್ತ ಸುತ್ತುತ್ತದೆ”ಎಂದು ಹೇಳುತ್ತಾರೆ ದೀಕ್ಷಿತ್ ಶೆಟ್ಟಿ.
‌
“ನಾನು ರಂಗಭೂಮಿಯಲ್ಲಿ ಪ್ರೊಡಕ್ಷನ್ ಬಾಯ್ ಆಗಿ ಕೆಲಸ ಮಾಡುವ ವ್ಯಕ್ತಿ. ಹಿಂದಿನ ಎಲ್ಲಾ ಸಿನಿಮಾಗಳಿಗೆ ಹೋಲಿಸಿದರೆ ಈ ಸಿನಿಮಾದ ಪಾತ್ರ ಉಳಿದೆಲ್ಲಾ ಪಾತ್ರಗಳಿಗಿಂತ ಈ ಪಾತ್ರ ವಿಭಿನ್ನವಾಗಿದೆ. ಮುಖ್ಯವಾದ ವಿಚಾರವೆಂದರೆ ಈ ಪಾತ್ರದಲ್ಲಿ ನಟನೆಗೆ ಮಹತ್ವವಿದೆ. ನಾನು ಇಂತಹ ಪಾತ್ರಕ್ಕೆ ಕಾಯುತ್ತಿದ್ದೆ “ಎಂದಿದ್ದಾರೆ.

ಸದ್ಯ ಸ್ಟ್ರಾಬೆರಿ ಚಿತ್ರದ ಶೂಟಿಂಗ್ ಮುಗಿಸಿರುವ ದೀಕ್ಷಿತ್ ಸ್ಮೈಲ್ ಎಂಬ ರೊಮ್ಯಾಂಟಿಕ್ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಇದಲ್ಲದೇ ಶೀಘ್ರಮೇವ ಕಲ್ಯಾಣ ಪ್ರಾಪ್ತಿ ರುಸ್ತು ,ಕೆಟಿಎಂ ಹಾಗೂ ತೆಲುಗಿನ ಮೀಟ್ ಕ್ಯೂಟ್ ಸಿನಿಮಾಗಳು ಅವರ ಕೈಯಲ್ಲಿವೆ.