- July 8, 2022
ಚಿರಯುವಕ ‘ಚಿಯಾನ್ ವಿಕ್ರಮ್’ ಆರೋಗ್ಯದಲ್ಲಿ ಏರು ಪೇರು.


‘ಚಿಯಾನ್’ ವಿಕ್ರಮ್ ಎಂದೇ ಖ್ಯಾತರಾಗಿರುವ ತಮಿಳಿನ ಖ್ಯಾತ ನಟ ವಿಕ್ರಮ್ ಅವರು ಅತೀ ಚೈತನ್ಯವುಳ್ಳವರು. 56 ವರ್ಷ ವಯಸ್ಸಿನ ಇವರು ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವಾರು ಸಿನಿರಸಿಕರ ನೆಚ್ಚಿನ ನಟರಾದ ಇವರ ಆರೋಗ್ಯದಲ್ಲಿ ಇಂದು ಸಮಸ್ಯೆ ಕಂಡುಬಂದಿದೆ. ಎದೆಯ ಭಾಗದಲ್ಲಿ ನೋವು ಕಾಣಿಸಿಕೊಂಡಿದ್ದು ಕೂಡಲೇ ಚೆನ್ನೈ ನ ‘ಕಾವೇರಿ ಹಾಸ್ಪಿಟಲ್’ಗೆ ದಾಖಲಾಗಿದ್ದಾರೆ. ಸದ್ಯ ಇವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರೂ, ನೆಟ್ಟಿಗರು ಹೇಳುವ ಕಥೆಯೇ ಬೇರೆ. ಸಣ್ಣ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾದ ವಿಕ್ರಮ್ ಅವರಿಗೆ ಹೃದಯಾಘಾತ ಆಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲೆಲ್ಲೆಡೆ ಹರಿದಾಡಿತ್ತು. ಆದರೆ ಅವರ ಮ್ಯಾನೇಜರ್ ಸೂರ್ಯನಾರಾಯಣ ಎಂ ಅವರು ಈ ಬಗ್ಗೆ ಟ್ವಿಟರ್ ನಲ್ಲಿ ಪ್ರಕಟಿಸುವ ಮೂಲಕ ಎಲ್ಲ ಸುದ್ದಿಗಳಿಗೂ ತೆರೆ ಎಳೆದಿದ್ದಾರೆ.










“ವಿಕ್ರಮ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು ಅದಕ್ಕೇ ಚಿಕಿತ್ಸೆ ಪಡೆದಿದ್ದಾರೆ. ಈಗ ಹಬ್ಬಿರುವ ಸುದ್ದಿಯಂತೆ ಅವರಿಗೆ ಹೃದಯಾಘಾತವಾಗಿಲ್ಲ. ಹಾಗಾಗಿ ಅವರಿಗೂ ಹಾಗು ಅವರ ಕುಟುಂಬಕ್ಕೂ ಬೇಕಾದ ವಿರಾಮವನ್ನು ನೀಡಬೇಕಾಗಿ ಕೇಳಿಕೊಳ್ಳುತ್ತೇವೆ. ನಮ್ಮ ಪ್ರೀತಿಯ ‘ಚಿಯಾನ್’ ಇದೀಗ ಚೇತರಿಸಿಕೊಂಡಿದ್ದು, ಡಿಸ್ಚಾರ್ಜ್ ಆಗಲಿದ್ದಾರೆ.” ಎಂದು ಹೇಳುವ ಮೂಲಕ ಎಲ್ಲ ಸುದ್ದಿಗಳಿಗೂ ಸತ್ಯ ತಿಳಿಸಿದ್ದಾರೆ. ವಿಕ್ರಮ್ ಅವರು ಇಂದು(ಜುಲೈ 8) ಸಂಜೆ ತಮ್ಮ ಮುಂದಿನ ಸಿನಿಮಾವಾದ ‘ಪೊನ್ನಿಯಿನ್ ಸೆಲ್ವನ್’ ನ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗುವವರಿದ್ದರು. ಅದರ ಮುಂಚೆಯೇ ಹೀಗಾಗಿದ್ದು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.








