• June 19, 2022

ಹೊಸ ಹೊಸ ಮೈಲಿಗಲ್ಲುಗಳನ್ನ ಏರುತ್ತಿದೆ ‘777 ಚಾರ್ಲಿ’

ಹೊಸ ಹೊಸ ಮೈಲಿಗಲ್ಲುಗಳನ್ನ ಏರುತ್ತಿದೆ ‘777 ಚಾರ್ಲಿ’

ಸದ್ಯ ಭಾರತದಾದ್ಯಂತ ಸುದ್ದಿಯಲ್ಲಿರುವ ಹಲವು ಪಾನ್-ಇಂಡಿಯನ್ ಚಿತ್ರಗಳಲ್ಲಿ ನಮ್ಮ ಕನ್ನಡದ ‘777 ಚಾರ್ಲಿ’ ಕೂಡ ಒಂದು. ಮನುಷ್ಯ ಮತ್ತು ನಾಯಿಯ ನಡುವಿನ ಅಪೂರ್ವ ಭಾಂದವ್ಯವನ್ನು ತೆರೆಮೇಲೆ ತೋರಿಸಿದ ಈ ಸಿನಿಮಾಗೆ ಪ್ರಪಂಚದಾದ್ಯಂತ ಪ್ರೇಕ್ಷಕರು ಭಾವುಕರಾಗುತ್ತಿದ್ದಾರೆ. ನಿರ್ದೇಶಕ ಕಿರಣ್ ರಾಜ್ ಹಾಗು ನಟ-ನಿರ್ಮಾಪಕ ರಕ್ಷಿತ್ ಶೆಟ್ಟಿಗೆ ಎಲ್ಲೆಡೆಯಿಂದ ಭಾವಯುಕ್ತ ಪ್ರತಿಕ್ರಿಯೆ ಬರುತ್ತಿದೆ. ಸದ್ಯ ಸಿನಿಮಾದ ಕಡೆಯಿಂದ ಹೊಸ ಹೊಸ ವಿಷಯಗಳು ಬರುತ್ತಿವೆ.

ಜೂನ್ 10ರಂದು ಬಿಡುಗಡೆ ಕಂಡ ಈ ಸಿನಿಮಾಗೆ ಇಂದು(ಜೂನ್ 19)ಎರಡನೇ ಭಾನುವಾರ. ಇಂದು ಕೂಡ ಚಿತ್ರದ ಟಿಕೆಟ್ ಬುಕಿಂಗ್ ಭರದಿಂದ ಸಾಗಿದೆ. ಸಿನಿಮಾ ಈಗಾಗಲೇ 50 ಕೋಟಿ ಕಲೆಕ್ಷನ್ ಕಂಡಿದ್ದು, 2022ರಲ್ಲಿ 50ಕೋಟಿ ಕ್ಲಬ್ ಸೇರಿದ ಮೂರನೇ ಸಿನಿಮಾ ಎನಿಸಿಕೊಂಡಿದೆ. ಈ ಹಿಂದೆ ಪುನೀತ್ ರಾಜಕುಮಾರ್ ಅಭಿನಯದ ‘ಜೇಮ್ಸ್’ ಹಾಗು ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾಗಳು ಈ ವರ್ಷದಲ್ಲಿ 50ಕೋಟಿ ಬಾಚಿದ್ದವು.ಸದ್ಯ ‘777 ಚಾರ್ಲಿ’ ಸಿನಿಮಾ 50ಕೋಟಿ ಕಲೆಕ್ಷನ್ ದಾಟಿ ಮುಂದೆ ಸಾಗಿದ್ದು, ನೂರು ಕೋಟಿ ಬಾಚುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

ಇದಷ್ಟೇ ಅಲ್ಲದೇ ಚಿತ್ರತಂಡಕ್ಕೆ ಕರ್ನಾಟಕ ರಾಜ್ಯ ಸರ್ಕಾರದಿಂದ ಸಂತಸದ ಸುದ್ದಿ ಸಿಕ್ಕಿದೆ. ‘777 ಚಾರ್ಲಿ’ ಸಿನಿಮಾವನ್ನು ನಾಡ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರಿಗಾಗಿ ವಿಶೇಷ ಪ್ರದರ್ಶನ ನೀಡಲಾಗಿತ್ತು. ಸಿನಿಮಾ ನೋಡಿ ಭಾವಕರಾಗಿದ್ದ ಅವರು ಕಣ್ಣಿನಲ್ಲಿ ನೀರು ಹರಿಸಿದ್ದರು. ಈಗ ರಾಜ್ಯ ಸರ್ಕಾರ ‘777 ಚಾರ್ಲಿ’ ಸಿನಿಮಾಗೆ ಸರಕು ಹಾಗು ಸೇವಾ ತೆರಿಗೆ(ಎಸ್ ಜಿ ಎಸ್ ಟಿ) ವಿಧಿಸದಂತೆ ನಿರ್ಧರಿಸಿದೆ. ಕರ್ನಾಟಕ ರಾಜ್ಯದಲ್ಲಿ ‘777 ಚಾರ್ಲಿ’ ಸಿನಿಮಾದಿಂದ ತೆರಿಗೆ ಸಂಗ್ರಹಿಸದಂತೆ ಆದೇಶ ಹೊರಡಿಸಿದೆ. ಈ ವಿಚಾರದಿಂದ ಚಿತ್ರತಂಡ ಸಂತುಷ್ಟರಾಗಿದ್ದು, ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.