- April 26, 2022
‘777 ಚಾರ್ಲಿ’ಯನ್ನ ಆಗಲೇ ವೀಕ್ಷಕರ ಫೇವರಿಟ್


ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವರ ಮುಂದಿನ ಚಿತ್ರ ‘777 ಚಾರ್ಲಿ’. ನಾಯಿಯೊಂದರ ಕಥೆಯೊಂದಿಗೆ ಜೀವನದ ಪಾಠವನ್ನ ಹೇಳಹೊರಟಿದ್ದಾರೆ ನಿರ್ದೇಶಕ ಕಿರಣ್ ರಾಜ್. ಮೂರು ವರ್ಷಗಳ ಹಿಂದೆಯೇ ಆರಂಭವಾಗಿದ್ದ ಈ ಚಿತ್ರ ಈಗ ಬಿಡುಗಡೆಗೆ ಸಿದ್ಧವಾಗಿದೆ. ಜೂನ್ 10ರಂದು ಪ್ರಪಂಚದಾದ್ಯಂತ ಬಿಡುಗಡೆ ಕಾಣುತ್ತಿದೆ ಈ ಚಿತ್ರ.




ಸಿನಿಮಾದ ಡಿಜಿಟಲ್ ಹಾಗು ದೂರದರ್ಶನದ ಹಕ್ಕುಗಳು ಮಾರಾಟವಾಗಿದ್ದು, ಕಲರ್ಸ್ ಕನ್ನಡ ವಾಹಿನಿ ಚಿತ್ರದ ದೂರದರ್ಶನದ ಪ್ರದರ್ಶನದ ಹಕ್ಕು ಕೊಂಡಿದ್ದರೆ, ವೂಟ್ ಸಂಸ್ಥೆ ಚಿತ್ರದ ಡಿಜಿಟಕ್ ಹಕ್ಕುಗಳನ್ನ ತನ್ನದಾಗಿಸಿಕೊಂಡಿದೆ. 9 ಕೋಟಿಗೆ ಚಿತ್ರದ ಸಟೇಲೈಟ್ ಹಕ್ಕುಗಳು, ಹಾಗು ಬರೋಬ್ಬರಿ 12 ಕೋಟಿಗೆ ಚಿತ್ರದ ಡಿಜಿಟಲ್ ಹಕ್ಕುಗಳ ವ್ಯವಹಾರ ನಡೆದಿದೆ. ಈ ನಡುವೆ, ಕಲರ್ಸ್ ಕನ್ನಡದ ವ್ಯಾವಹಾರಿಕ ಮುಖ್ಯಸ್ಥ(Business Head) ಪರಮೇಶ್ವರ್ ಗುಂಡಕಲ್ ಅವರು ಚಿತ್ರವನ್ನ ನೋಡಿದ್ದು ಚಿತ್ರವನ್ನ, ಚಿತ್ರತಂಡವನ್ನ ಹಾಡಿ ಹೊಗಳಿದ್ದಾರೆ. ತಮ್ಮ ಬಾಲ್ಯದ ಕಥೆಯೊಂದನ್ನ ಹೇಳಿ, “ಸಾಕುಪ್ರಾಣಿಗಳೊಡಗಿನ ಬಾಂಧವ್ಯಗಳನ್ನ ತೊರೆದಿದ್ದ ನನಗೆ, ಮರಳಿ ತಿರುಗಿ ನೋಡುವಂತೆ ಈ ಚಿತ್ರ ಮಾಡಿದೆ. ಇದೊಂದು ನಿಜಕ್ಕೂ ಮನಕಲಕುವಂತಹ ಸಿನಿಮಾ” ಎಂದಿದ್ದಾರೆ. ಕಿರಣ್ ರಾಜ್ ಅವರ ನಿರ್ದೇಶನವನ್ನ ಹೊಗಳುತ್ತ, “ಮೊದಲ ಚಿತ್ರದಲ್ಲೇ ಎಲ್ಲವನ್ನು ಸರಿಯಾಗಿ ಮಾಡಿದರೆ ಮುಂದೇನು ಮಾಡುತ್ತೀರಿ ಕಿರಣ್ ರಾಜ್ ಅವರೇ?” ಎಂದು ಪ್ರಶ್ನೆಯನ್ನೂ ಹಾಕಿದ್ದಾರೆ. ಚಿತ್ರದ ಪೋಸ್ಟರ್ ಒಂದರ ಜೊತೆಗೆ, ಚಿತ್ರದ ಬಗೆಗಿನ ಸಾಕಷ್ಟು ವಿವರಣೆಯನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಪರಮೇಶ್ವರ್.




ಜೂನ್ 10ರಂದು ಬಿಡುಗಡೆಯಗುತ್ತಿರೋ ಈ ಚಿತ್ರ, ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಗಳಲ್ಲಿ ತೆರೆಕಾಣಲಿದೆ. ಜಿ ಎಸ್ ಗುಪ್ತ ಹಾಗು ರಕ್ಷಿತ್ ಶೆಟ್ಟಿಯವರ ಬಂಡವಾಳದಲ್ಲಿ, ‘ಪರಮ್ ವಾಹ್ ಸ್ಟುಡಿಯೋಸ್’ ಅಡಿಯಲ್ಲಿ ಚಿತ್ರ ನಿರ್ಮಾಣಗೊಳ್ಳುತ್ತಿದ್ದು, ಕಿರಣ್ ರಾಜ್ ಅವರ ನಿರ್ದೇಶನ ಹಾಗು ನೋಬಿನ್ ಪೌಲ್ ಅವರ ಸಂಗೀತ ಚಿತ್ರದಲ್ಲಿರಲಿದೆ. ರಕ್ಷಿತ್ ಶೆಟ್ಟಿಯವರಿಗೆ ನಾಯಕಿಯಾಗಿ, ಸಂಗೀತ ಶೃಂಗೇರಿ ಅವರು ಕಾಣಿಸಿಕೊಳ್ಳಲಿದ್ದು, ಚಿತ್ರದಲ್ಲಿ ರಾಜ್ ಬಿ ಶೆಟ್ಟಿ, ದಾನಿಶ್ ಸೈಟ್, ಬೊಬಿ ಸಿಂಹ ಮುಂತಾದ ಹೆಸರಾಂತ ನಟರು ಬಣ್ಣ ಹಚ್ಚಿದ್ದಾರೆ.








