- July 8, 2022
ಮನದಲ್ಲಿರೋ ‘ಚಾರ್ಲಿ ಮತ್ತು ಧರ್ಮ’ ಮನೆಗಳಿಗೆ ಬರೋ ದಿನಾಂಕ ಫಿಕ್ಸ್.


ಸಿನಿಮಾ ನೋಡಿದವರಲ್ಲಿ ಬಹುಪಾಲು ಪ್ರತಿಯೊಬ್ಬರ ಕಣ್ಣಿನಲ್ಲೂ ನೀರು ಕೂರಿಸಿದಂತಹ ಕೀರ್ತಿ ‘777 ಚಾರ್ಲಿ’ಯದು. ‘ಧರ್ಮ ಹಾಗು ಚಾರ್ಲಿ’ ಸೇರಿ ಒಬ್ಬ ಸಾಮಾನ್ಯ ವ್ಯಕ್ತಿಯ ಬದುಕಿನಲ್ಲಿ ನಾಯಿಯೊಂದರ ಪಾತ್ರ ಎಂತದ್ದು ಎಂದು ತೆರೆಮೇಲೆ ತೋರಿಸಿದ್ದಾರೆ. ನಿರ್ದೇಶಕರು ಕಿರಣ್ ರಾಜ್ ಹಾಗು ನಿರ್ಮಾಪಕ, ‘ಧರ್ಮ’ ಪಾತ್ರದಾರಿ ರಕ್ಷಿತ್ ಶೆಟ್ಟಿಗೆ ಜೊತೆಗೆ ‘ಚಾರ್ಲಿ’ ನಾಯಿ ಹಾಗು ಅದನ್ನ ಸಿದ್ದಗೊಳಿಸಿದ ಪ್ರಮೋದ್ ಅವರಿಗೆ ದೇಶದ ಮೂಲೆಮೂಲೆಗಳಿಂದ ಪ್ರಶಂಸೆಗಳು ಹರಿದುಬರುತ್ತಿವೆ. ಇದೀಗ ಈ ಚಿತ್ರ ಒಟಿಟಿ ಪರದೆಯ ಮೂಲಕ ಮನೆಮನೆಗಳಿಗೆ ಹೆಜ್ಜೆ ಇಡಲು ದಿನಾಂಕ ಗೊತ್ತಾಗಿದೆ.


‘777 ಚಾರ್ಲಿ’ ಬಿಡುಗಡೆಗೂ ಮುನ್ನವೇ ಚಿತ್ರದ ಸಾಟೆಲೈಟ್ ಹಾಗು ಡಿಜಿಟಲ್ ಹಕ್ಕುಗಳು ಮಾರಾಟವಾಗಿದ್ದವು. ಕಲರ್ಸ್ ಕನ್ನಡ ಹಾಗು ‘ವೂಟ್’ ‘777 ಚಾರ್ಲಿ’ಯ ಪ್ರದರ್ಶನಕ್ಕೆ ರೂವಾರಿಗಳಾಗಿದ್ದರು ಎಂದು ಖಾತ್ರಿಯಾಗಿತ್ತು. ಈ ಬಗ್ಗೆ ಕಲರ್ಸ್ ಕನ್ನಡದ ವ್ಯಾವಹಾರಿಕ ಮುಖ್ಯಸ್ಥ(Buisiness Head) ಪರಮೇಶ್ವರ್ ಗುಂಡ್ಕಲ್ ಅವರು ಒಂದು ಭಾವನಾತ್ಮಕ ಪೋಸ್ಟ್ ಅನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುವ ಮೂಲಕ ಹೇಳಿದ್ದರು. ಚಿತ್ರ ಅವರಿಗೆ ನೀಡಿದ ಭಾವನೆಗಳನ್ನು ತಮ್ಮ ಬಾಲ್ಯದ ನೆನಪಿನೊಂದರ ಜೊತೆಗೆ ಸೇರಿಸಿ ಹಾಡಿಹೊಗಳಿದ್ದರು ಪರಮ್. ಇದೀಗ ‘777 ಚಾರ್ಲಿ’ ಸಿನಿಮಾ ‘ವೂಟ್’ ಆಪ್ ನಲ್ಲಿ ಪ್ರದರ್ಶನ ಕಾಣಲು ದಿನಾಂಕ ಗೊತ್ತಾಗಿದೆ. ಇದೇ ಜುಲೈ 29ರಿಂದ ‘777 ಚಾರ್ಲಿ’ ವೂಟ್ ನಲ್ಲಿ ನೋಡಲು ಸಿಗಲಿದೆ. ಚಿತ್ರಮಂದಿರಗಳಲ್ಲಿ ಈ ಭಾವಪೂರ್ಣ ಕಥಾಹಂದರವನ್ನು ನೋಡಲಾಗದೆ ಇದ್ದವರು ವೂಟ್ ನ ಮೂಲಕ ಕಾಣಬಹುದಾಗಿದೆ.




ರಕ್ಷಿತ್ ಶೆಟ್ಟಿ ನಾಯಕನಾಗಿ, ಸಂಗೀತ ಶೃಂಗೇರಿ ನಾಯಕಿಯಾಗಿ ಹಾಗು ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರವೊಂದರಲ್ಲಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುದ್ದು ಶಾರ್ವರಿಯ ನಟನೆಗೆ ಮನಸೋಲದವರೇ ಇಲ್ಲ. ನೋಬಿನ್ ಪಾಲ್ ಅವರ ಸಂಗೀತ ಕಿವಿಯಲ್ಲಿ ಒಡಲಲ್ಲಿ ಗುನುಗುತ್ತಾ ಇರುವಂತದ್ದು. ತಮ್ಮ ಮೊದಲ ಚಿತ್ರದಲ್ಲೇ ಇಷ್ಟು ದೊಡ್ಡ ಯಶಸ್ಸು ಪಡೆದ ಕಿರಣ್ ರಾಜ್ ಅವರ ಬಗ್ಗೆ ಎಲ್ಲೆಡೆ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ. ರಕ್ಷಿತ್ ಅವರದೇ ‘ಪರಮ್ ವಾಹ್ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ಮೂಡಿಬಂದ ಈ ಸಿನಿಮಾ ಸದ್ಯ ಚಿತ್ರಮಂದಿರಗಳಲ್ಲಿ ಮೋಡಿ ಮಾಡುತ್ತಿದೆ.






