- June 26, 2022
ರಕ್ಷಿತ್ ಶೆಟ್ಟಿ ಗೆ ಹೊಸ ಮೈಲಿಗಲ್ಲಾದ ‘777 ಚಾರ್ಲಿ’


ರಕ್ಷಿತ್ ಶೆಟ್ಟಿ ಕನ್ನಡದಲ್ಲಿ ಹೊಸ ಬಗೆಯ ಬೆಳವಣಿಗೆಗಳನ್ನು ತಂದಂತಹ ಯುವ ನಟ-ನಿರ್ದೇಶಕರಲ್ಲಿ ಒಬ್ಬರು. ವಿಭಿನ್ನ ಕಥೆ ಅಷ್ಟೇ ವಿಭಿನ್ನ ಸಿನಿಮಾ ಇವರ ವಿಶೇಷತೆ. ಮಾಡಿರುವುದು ಬೆರಳೆಣಿಕೆಯಷ್ಟು ಸಿನಿಮಾಗಳು ಮಾತ್ರವೇ ಆದರು, ಚಿತ್ರಗರಂಗದಲ್ಲಿ ಇವರು ಬೀರಿರುವ ಪ್ರಭಾವ ಅಪಾರ. ಅಗಾಧ ಅಭಿಮಾನಿಗಳನ್ನು ಹೊಂದಿರುವ ರಕ್ಷಿತ್ ಶೆಟ್ಟಿ ಅವರ ಇತ್ತೀಚೆಗೆ ಬಿಡುಗಡೆ ಕಂಡು ಎಲ್ಲೆಡೆ ಪ್ರಶಂಸೆ ಪಡೆಯುತ್ತಿರುವ ಚಿತ್ರ ‘777 ಚಾರ್ಲಿ’. ಈ ಸಿನಿಮಾ ಇದೀಗ ರಕ್ಷಿತ್ ಶೆಟ್ಟಿಯವರಿಗೆ ಹೊಸ ಮೈಲಿಗಲ್ಲಾಗಿದೆ.






ಈ ವರೆಗೆ ಸುಮಾರು 9 ರಿಂದ 10 ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿರುವ ರಕ್ಷಿತ್ ಶೆಟ್ಟಿ ಅವರ ಎಲ್ಲ ಸಿನಿಮಾಗಳಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರವಾಗಿ ‘777 ಚಾರ್ಲಿ’ ಹೊರಹೊಮ್ಮುತ್ತಿದೆ. ಈ ವರೆಗೆ ಪ್ರಪಂಚದಾದ್ಯಂತ ಸುಮಾರು 80 ಕೋಟಿಯಷ್ಟು ಬಾಚಿಕೊಂಡಿರುವ ಈ ಸಿನಿಮಾ ರಕ್ಷಿತ್ ಶೆಟ್ಟಿಯವರ ಹಿಂದಿನ ಎಲ್ಲ ಸಿನಿಮಾಗಳಿಗಿಂತಲೂ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಹಿಂದೆ 2019ರಲ್ಲಿ ತೆರೆಕಂಡ ‘ಅವನೇ ಶ್ರೀಮನ್ನಾರಾಯಣ’ ಸುಮಾರು 75 ಕೋಟಿ ಗಳಿಸಿತ್ತು. ಇದೀಗ ‘777 ಚಾರ್ಲಿ’ 80 ಕೋಟಿಯಷ್ಟು ಗಳಿಸಿ ರಭಸದಿಂದ ಮುಂದೆ ಸಾಗುತ್ತಲಿದೆ. ಸದ್ಯದಲ್ಲೇ ಚಿತ್ರ 100 ಕೋಟಿ ಕ್ಲಬ್ ಸೇರೋ ನಿರೀಕ್ಷೆಯಲ್ಲಿದೆ.






ಪ್ರಪಂಚದಾದ್ಯಂತ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಕಂಡಿರೋ ಈ ಸಿನಿಮಾ ಎಲ್ಲೆಡೆ ಭಾವುಕವಾದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ನಿರ್ದೇಶಕ ಕಿರಣ್ ರಾಜ್ ಹಾಗು ನಟ ರಕ್ಷಿತ್ ಶೆಟ್ಟಿ ಅವರನ್ನು ಎಲ್ಲರೂ ಹೊಗಳುತ್ತಿದ್ದು, ಚಿತ್ರಮಂದಿರಗಳು ಈಗಲೂ ಕೂಡ ಹೌಸ್ ಫುಲ್ ಬೋರ್ಡ್ ಗಳನ್ನೂ ನೇತು ಹಾಕಿಕೊಳ್ಳುತ್ತಿವೆ. ಒಬ್ಬ ಮನುಜ ಹಾಗು ನಾಯಿಯ ನಡುವಿನ ಸಂಭಂದವನ್ನು ಹೇಳೋ ಈ ಚಿತ್ರ ರಕ್ಷಿತ್ ಶೆಟ್ಟಿ ಅವರ ಸಿನಿ ಪಯಣದಲ್ಲಿ ಹೊಸ ಮೆಟ್ಟಿಲಾಗಲಿದೆ.






