- July 10, 2022
ಡಿಲೀಟ್ ಆಗಿದ್ದ ದೃಶ್ಯವನ್ನು ಬಿಡುಗಡೆ ಮಾಡಿದ ಕಿರಣ್ ರಾಜ್


ಚಿಕ್ಕ ಬಜೆಟ್ ನಲ್ಲಿ ನಿರ್ಮಾಣ ಮಾಡಿದ ಚಿತ್ರವೊಂದು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಗಳಿಸಿ ಈ ಸಿನಿಮಾ ಬಗ್ಗೆ ಇಡೀ ದೇಶವೇ ಮಾತನಾಡುವಂತೆ ಮಾಡಿರುವುದು ಅಕ್ಷರಶಃ ಸುಳ್ಳಲ್ಲ. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಿಲೀಸ್ ಆಗಿ ಯಶಸ್ವಿ ಚಿತ್ರ ಎನಿಸಿಕೊಳ್ಳುವುದರೊಂದಿಗೆ 777 ಚಾರ್ಲಿ ಈಗಾಗಲೇ 25 ದಿನಗಳನ್ನು ಪೂರ್ತಿಗೊಳಿಸಿ 50 ದಿನಗಳನ್ನು ಪೂರ್ತಿಗೊಳಿಸುವತ್ತ ದಾಪುಗಾಲಿಡುತ್ತಿದೆ.


ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಸಿನಿಮಾ ಬಾಕ್ಸಾಫೀಸ್‌ನಲ್ಲೂ ಸೂಪರ್ ಕಲೆಕ್ಷನ್ ಮಾಡಿದೆ. ಸಿನಿಮಾ ಗೆದ್ದಿರುವ ಖುಷಿಯಲ್ಲಿರುವ ತಂಡ ಸಿನಿಮಾದಲ್ಲಿ ಇಲ್ಲದ ದೃಶ್ಯವನ್ನು ರಿಲೀಸ್ ಮಾಡಿದೆ.


ಸಿನಿಮಾ ಎಡಿಟಿಂಗ್ ಮಾಡುವಾಗ ನಿರ್ದೇಶಕರು ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವುದು ಸಹಜ. ಪ್ರತಿಯೊಂದು ಚಿತ್ರತಂಡವೂ ಅದೆಷ್ಟೋ ದೃಶ್ಯಗಳಿಗೆ ಕತ್ತರಿ ಹಾಕಿರುತ್ತೆ. ಹೀಗೆ ಸಿನಿಮಾದ ಅವಧಿ ಹಾಗೂ ವೇಗವನ್ನು ಗಮನದಲ್ಲಿಟ್ಟುಕೊಂಡು ‘777 ಚಾರ್ಲಿ’ಯ ದೃಶ್ಯಕ್ಕೂ ಕತ್ತರಿ ಹಾಕಲಾಗಿತ್ತು.


ಕತ್ತರಿ ಹಾಕಿದ್ದ ಸಿನಿಮಾದ ಹಲವು ದೃಶ್ಯಗಳಲ್ಲಿ ಈಗ ಒಂದನ್ನು ಬಿಡುಗಡೆ ಮಾಡಲಾಗಿದೆ. ‘777 ಚಾರ್ಲಿ’ಯ ನಿರ್ದೇಶಕ ಕಿರಣ್ ರಾಜ್ ಆ ದೃಶ್ಯವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಧರ್ಮ, ಚಾರ್ಲಿ ಹಾಗೂ ಕಾಲೋನಿಯ ಮಂದಿಯೆಲ್ಲಾ ಸೇರಿ ಆದ್ವಿಕಾಳ ಹುಟ್ಟುಹಬ್ಬ ಆಚರಿಸಿಕೊಳ್ಳುವ ದೃಶ್ಯವನ್ನು ಕಿರಣ್ ರಾಜ್ ಹಂಚಿಕೊಂಡಿದ್ದಾರೆ.


ಕೇವಲ ‘777 ಚಾರ್ಲಿ’ಯ ಕನ್ನಡ ಅವತರಣಿಯ ಡಿಲಿಟ್ ಆದ ದೃಶ್ಯವನ್ನಷ್ಟೇ ಅಲ್ಲದೆ, ಬಿಡುಗಡೆಯಾದ ಎಲ್ಲಾ ಭಾಷೆಯಲ್ಲೂ ಈ ದೃಶ್ಯವನ್ನು ಬಿಡುಗಡೆ ಮಾಡಲಾಗಿದೆ. ಈ ದೃಶ್ಯ ನೋಡಿ ಪ್ರೇಕ್ಷಕರು ಹರ್ಷ ವ್ಯಕ್ತ ಪಡಿಸಿದ್ದಾರೆ.ನಿರ್ದೇಶಕ ಕಿರಣ್ ರಾಜ್ ವಿಡಿಯೋ ಶೇರ್ ಮಾಡುವುದರ ಜೊತೆಗೆ ಆದ್ರಿಕಾಗೆ 7ನೇ ವರ್ಷದ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ.


ಕಿರಣ್ ರಾಜ್ ರಿಲೀಸ್ ಮಾಡಿರುವ ದೃಶ್ಯದಲ್ಲಿ ಧರ್ಮ ಮತ್ತು ಚಾರ್ಲಿ ಆದ್ರಿಕಾಳ ಹುಟ್ಟುಹಬ್ಬವನ್ನು ಸೆಲೆಬ್ರೆಟ್ ಮಾಡಿದ್ದಾರೆ. ನಮ್ಮ ಪೋರಿಯ ಹುಟ್ಟುಹಬ್ಬದ ಪಾರ್ಟಿಯನ್ನು ಎಂಜಾಯ್ ಮಾಡಿ” ಎಂದು ನಿರ್ದೇಶಕ ಕಿರಣ್ ರಾಜ್ ಬರೆದುಕೊಂಡಿದ್ದಾರೆ.


ಇನ್ನೊಂದು ಕಡೆ ಜೂನ್ 10 ರಂದು ಬಿಡುಗಡೆಯಾಗಿದ್ದ ಸಿನಿಮಾ ಸುಮಾರು 150 ಕೋಟಿ ಬ್ಯುಸಿನೆಸ್ ಮಾಡಿದೆ ಎಂದು ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದಾರೆ. ಥಿಯೇಟರ್‌ನಿಂದ ಬಂದ ಹಣ, ಒಟಿಟಿ ಹಾಗೂ ಸ್ಯಾಟಲೈಟ್‌ನಿಂದ ಬಂದ ಹಣವೇ ಸುಮಾರು 150 ಕೋಟಿ ರೂ ದಾಟಿದೆ ಎಂದು ಹೇಳಿದ ರಕ್ಷಿತ್ ಶೆಟ್ಟಿ ಸಿನಿಮಾದ ಯಶಸ್ಸಿಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
‘777 ಚಾರ್ಲಿ’ ಸಿನಿಮಾ ಇದೇ ಜುಲೈ 29ಕ್ಕೆ 50 ದಿನಗಳನ್ನು ಪೂರೈಸಲಿದೆ. ಇದೇ ದಿನ ಚಾರ್ಲಿ ವೂಟ್ ಸೆಲೆಕ್ಟ್‌ನಲ್ಲಿ ಬಿಡುಗಡೆಯಾಗಲಿದೆ. ಶ್ವಾನ ಪ್ರಿಯರಿಗೆ ಈ ಸಿನಿಮಾ ಸಿಕ್ಕಾಪಟ್ಟೆ ಇಷ್ಟವಾಗುವುದರೊಂದಿಗೆ ಹೊಸ ಅಭಿರುಚಿಯ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಬರುವಲ್ಲೂ ಜಯಶಾಲಿಯಾಗಿದೆ. ಹೊಸತನ ಹೊತ್ತು ಬಂದಿರುವ ಈ ಸಿನೆಮಾ ಇನ್ನಷ್ಟು ಯಶಸ್ಸನ್ನು ಸಾಧಿಸಲಿ ಎಂದು ಆಶಿಸೋಣ.




